ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಬೃಹತ್ ಗೀತೋತ್ಸವವು ಇದೇ 8 ರಿಂದ ಡಿಸೆಂಬರ್ 7ರ ವರೆಗೆ ನಡೆಯಲಿದೆ. ಇದರ ಅಂಗವಾಗಿ ನ.28 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಕೃಷ್ಣಮಠ ಸಮೀಪದ ಗೀತಾಮಂದಿರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, 28ರಂದು ಬೆಳಗ್ಗೆ 9.30ಕ್ಕೆ ಲಕ್ಷ ಕಂಠ ಗೀತಾ ಪಾರಾಯಣ ಆರಂಭವಾಗಲಿದ್ದು, ಮಧ್ಯಾಹ್ನ 12.30ಕ್ಕೆ ಕೊನೆಗೊಳ್ಳಲಿದೆ.
ಅಂದು ಮಧ್ಯಾಹ್ನ 12 ಗಂಟೆಗೆ ಮೋದಿ ಅವರು ಮಠಕ್ಕೆ ಭೇಟಿ ನೀಡುವರು ಎಂದರು. ಪ್ರಧಾನಿ ಅವರು ಇದೇ ವೇಳೆ ಸುವರ್ಣ ಮುಖಮಂಟಪ ಮತ್ತು ಕನಕನ ಕಿಂಡಿಗೆ ಕನಕ ಕವಚ ಉದ್ಘಾಟಿಸುವರು. ಬಳಿಕ ಗೀತಾ ಮಂದಿರಕ್ಕೆ ಭೇಟಿ ನೀಡುವರು.
ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಶಿ, ರಾಜ್ಯ ಗೃಹಸಚಿವ ಜಿ.ಪರಮೇಶ್ವರ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಇದೇ 8ರಂದು ಬೃಹತ್ ಗೀತೋತ್ಸವ ವನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸುವರು. ನ.30ರಂದು ನಡೆಯಲಿರುವ ಸಂತ ಸಂಗಮ ಮತ್ತು ಭಜನೋತ್ಸವ ಕಾರ್ಯ ಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳುವರು ಎಂದು ಹೇಳಿದರು.