ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Nalanda High School and Little Angels Anantha Schools) ಮಕ್ಕಳ ದಿನಾಚರಣೆಯನ್ನು (Children’s Day) ಆಕರ್ಷಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲೆಗಳ ಎಲ್ಲ ಮಕ್ಕಳು ಬಣ್ಣ ಬಣ್ಣದ ಉಡುಪಿನಲ್ಲಿ ಬಹಳ ಸಂಭ್ರಮದಿಂದ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಈ ವರ್ಷದ ಮಕ್ಕಳ ದಿನಾಚರಣೆ ಚಿಕ್ಕ ಕೈಗಳು ದೊಡ್ಡ ಕನಸುಗಳು(Little Hands Big Dreams) ಎಂಬ ಧ್ಯೇಯ ವಾಕ್ಯದೊಂದಿಗೆ ರೂಪಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು, ಪ್ರತಿ ವರ್ಷ ನವೆಂಬರ್ 14ರ ಮಕ್ಕಳ ದಿನಾಚರಣೆ ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು ಮಕ್ಕಳ ಸಂತೋಷ, ಆರೋಗ್ಯ ಮತ್ತು ವಿದ್ಯಾಭ್ಯಾಸದ ರಕ್ಷಣೆ ಮಾಡಬೇಕೆಂದು ಎಚ್ಚರಿಸುತ್ತದೆ.

ಮಕ್ಕಳು ನಮ್ಮೆಲ್ಲರ ಭವಿಷ್ಯದ ಆಶಾಕಿರಣ, ನಮ್ಮೆಲ್ಲರ ಚೈತನ್ಯದಾಯಕ ಹಾಗೂ ನಮ್ಮೆಲ್ಲರ ನಗುವಿನ ಕಾರಣ. ಆದುದರಿಂದ ಅವರೆಲ್ಲರಿಗೂ ಉತ್ತಮ ಆರೋಗ್ಯ, ವಿದ್ಯೆ, ವಿವೇಕವನ್ನು ನೀಡುವುದರ ಮೂಲಕ ಅವರ ಭವಿಷ್ಯವನ್ನು ಬೆಳಗೋಣ.

ಈ ದಿನ ನಮ್ಮ ಶಾಲೆಗಳ ಎಲ್ಲಾ ಮಕ್ಕಳು ತಮ್ಮಲ್ಲಿ ಹುದುಗಿರುವ ಎಲ್ಲಾ ರೀತಿಯ ಕಲಾಪ್ರತಿಭೆಯನ್ನು ಹಾಡು, ನೃತ್ಯ, ಆಟ, ವರ್ಣಚಿತ್ರ, ಏಕಪಾತ್ರಾಭಿನಯ ಮುಂತಾದವುಗಳ ಮೂಲಕ ಅದ್ಭುತವಾಗಿ ಪ್ರದರ್ಶಿಸಿದ್ದು ಮನಸೂರೆಗೊಂಡಿದ್ದಾರೆ ಎಂದು ಹೇಳಿ ಮಕ್ಕಳೆಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೂ ಕಿರು ಕಾಣಿಕೆಗಳನ್ನು ನೀಡಲಾಯಿತು.
ಶಾಲೆಗಳ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ, ಸುನೀತಾ ಪಿ ಹಾಗೂ ಸಹಶಿಕ್ಷಕರೆಲ್ಲರೂ ಉಪಸ್ಥಿತರಿದ್ದರು.
