ಬೆಂಗಳೂರು: ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (Salumarada Timmakka) ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು.
ಈ ಸಮಯವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ನಾಳೆ (ನ.15)ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ ಎಂದು ನಕಲಿ ಪತ್ರವನ್ನು ಹರಡಿದ್ದಾರೆ.
ನಕಲಿ ಅಧಿಸೂಚನೆ

ನಕಲಿ ಪತ್ರದಲ್ಲಿ ಸರ್ಕಾರದ ಉಪ ಕಾರ್ಯದರ್ಶಿ ಅಲಿಸಾ ಅಂಡ್ರೂಸ್ ಅಧಿಸೂಚನೆ ಹೊರಡಿಸಿದ್ದು, ಶನಿವಾರದಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಾಕು ಮರದ ತಿಮ್ಮಕ್ಕ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಬರೆದಿದೆ. ಆದರೆ ಈ ವರೆಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಯಾವುದೇ ರಜೆ ಘೋಷಿಸಿಲ್ಲ.
ಅಸಲಿ ಅಧಿಸೂಚನೆ

ಸರ್ಕಾರದ ಅಧಿಕೃತ ಅಧಿಸೂಚನೆಯಲ್ಲಿ ವೃಕ್ಷಮಾತೆ ನಾಡೋಜ, ಪದ್ಮಶ್ರೀ ಪುರಸ್ಕೃತರು ಹಾಗೂಪರಿಸರ ರಾಯಭಾರಿ, ಡಾ. ಸಾಲುಮರದ ತಿಮ್ಮಕ್ಕ ಅವರು ಇಂದು (ನ.14) ನಿಧನರಾಗಿರುತ್ತಾರೆ. ಇವರ ನಿಧನಕ್ಕೆ ಸರ್ಕಾರವು ತೀವು ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿದೆ ಎಂದು ಸರ್ಕಾರದ ಅಧಿನ ಕಾರ್ಯದರ್ಶಿ ಬಾಣದ ರಂಗಯ್ಯ ಹೇಳಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
114 ವರ್ಷಗಳ ಕಾಲ ಬದುಕಿದ ಸಾಲು ಮರದ ತಿಮ್ಮಕ್ಕನವರು ಇಂದು ದೈವಾಧೀನರಾಗಿದ್ದಾರೆ. ಅವರು ಹುಟ್ಟೂರು ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮ ಜನಿಸಿದರು. ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ , ಕೇಂದ್ರಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.
ತಿಮ್ಮಕ್ಕ ಅವರ ಕೊನೆ ಆಸೆ: ಪರಿಶೀಲಿಸಿ ಕ್ರಮ
ತಿಮ್ಮಕ್ಕ ಅವರ ಕೊನೆ ಆಸೆಯ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೊಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.
ತಿಮ್ಮಕ್ಕ ಅವರ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರು ಎರಡು ಮೂರು ಸ್ಥಳಗಳನ್ನು ಗೊತ್ತು ಮಾಡಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದರು.
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ
“ಪರಿಸರ ಉಳಿವಿಗೆ ತಮ್ಮ ಜೀವನ ಮುಡುಪಾಗಿಟ್ಟವರು ನಮ್ಮ ಜಿಲ್ಲೆಯ ಸಾಲುಮರದ ತಿಮ್ಮಕ್ಕನವರು. ಪರಿಸರ ಉಳಿವಿಗೆ, ಜಾಗೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, “ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ತಿಮ್ಮಕ್ಕ ಅವರದ್ದು ಮಹಾನ್ ವ್ಯಕ್ತಿತ್ವ” ಎಂದರು.
ಮರಗಳನ್ನೇ ಸ್ವಂತ ಮಕ್ಕಳೆಂದು ಬೆಳೆಸಿ ನೀರುಣಿಸಿದ ವೃಕ್ಷಮಾತೆ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಇಡೀ ಪರಿಸರವೇ ಇಂದು ದುಃಖದಲ್ಲಿ ಇರುವಂತೆ ನನಗೆ ಭಾಸವಾಗುತ್ತಿದೆ. “ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು” ಎನ್ನುವ ಮಾತಿದೆ. ಆ ಮಾತಿಗೆ ಅನ್ವಯದಂತೆ ಬದುಕಿದ ಮಹಾನ್ ತಾಯಿಗೆ ನಾನು ಶಿರಬಾಗಿಸಿ ನಮಿಸುತ್ತೇನೆ. 114 ವರ್ಷಗಳ ತುಂಬು ಜೀವನ ನಡೆಸಿ ಹೊರಟಿದ್ದಾರೆ.
ಅವರು ಬೆಳೆಸಿದ ಮರಗಳು ಸೇರಿದಂತೆ ನಮ್ಮೆಲ್ಲರಲ್ಲಿ ಅವರು ಮೂಡಿಸಿದ ಜಾಗೃತಿ ಸದಾ ಜೀವಂತವಾಗಿರಲಿದೆ. ತಿಮ್ಮಕ್ಕ ಅವರು ಕರ್ನಾಟಕದ ಹಾಗೂ ಇಡೀ ಭಾರತದ ಹೆಮ್ಮೆ. ರಸ್ತೆ ಬದಿಯಲ್ಲಿ ಕಿಲೋಮೀಟರ್ ಗಟ್ಟಲೇ ಗಿಡಗಳನ್ನು ನೆಟ್ಟು ನಿತ್ಯ ನೀರು ಹಾಕಿ ಮರಗಳಾಗುವಂತೆ ಬೆಳೆಸಿದ್ದರು. ಮಕ್ಕಳಂತೆ ನೋಡಿಕೊಂಡಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ 4.5 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದರು. ಆ ದಾರಿಯಲ್ಲಿ ಹೋದಾಗಲೆಲ್ಲಾ ಅವರೇ ನೆನಪಾಗುತ್ತಿದ್ದರು. ಈವರೆಗೆ 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಹೊಸ ಪೀಳಿಗೆಗೆ ಮಾದರಿಯನ್ನು ಬಿಟ್ಟು ಹೋಗಿದ್ದಾರೆ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವೃಕ್ಷ ಮಾತೆ
ಅನಾರೋಗ್ಯದಿಂದ ಬಳಲುತ್ತಿದ್ದ ಸಾಲು ಮರದ ತಿಮ್ಮಕ್ಕ ಅವರನ್ನು ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ವಿಧಿವಶರಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ.
ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು.
ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾಗಿದ್ದ ಇವರಿಗೆ 2019ರಲ್ಲಿ ಪದ್ಮಶ್ರೀ ಲಭಿಸಿತ್ತು.
ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು, ಗಣ್ಯರಿಂದ ಸಂತಾಪ ವ್ಯಕ್ತವಾಗಿದೆ.