ದೊಡ್ಡಬಳ್ಳಾಪುರ; ಭಾರತದಲ್ಲಿ ಚಿಕ್ಕ ಮಕ್ಕಳಿಗೂ ಸೇರಿದಂತೆ ದಿನೇ ದಿನೇ ಮಧುಮೇಹಿಗಳ (Diabetes) ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿಡಬಹುದು ಎಂದು ತಜ್ಞ ವೈದ್ಯರಾದ ಡಾ.ಕೆ.ವಿ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಶ್ರೀ ರಾಮ ಆಸ್ಪತ್ರೆಯಲ್ಲಿ ಶ್ರೀ ರಾಮ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಸತಪಾಸಣೆ ಶಿಬಿರ ಮತ್ತು ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧುಮೇಹದ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೆ ಚಿಕಿತ್ಸೆಯೊಂದಿಗೆ ಸಮತೋಲನ ಆಹಾರ, ನಡಿಗೆ, ಸೂರ್ಯ ನಮಸ್ಕಾರದಂತಹ ನಿಯಮಿತ ವ್ಯಾಯಾಮ ಸಹ ಅವಶ್ಯವಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಒತ್ತಡದ ಬದುಕು, ನಾವು ದೇಹಕ್ಕೆ ಸಾಕಷ್ಟುವ್ಯಾಯಾಮ ನೀಡದ ಪರಿಣಾಮ, ಮಧುಮೇಹ ರಕ್ತದೊತ್ತಡಗಳು ಹೆಚ್ಚಾಗುತ್ತಿವೆ.
ಇತರೆ ಕಾಯಿಲೆಗಳಿಗೂ ಕಾರಣವಾಗಿರುವ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ, ರೋಗ ನಿಯಂತ್ರಣದ ಅಂಶಗಳನ್ನು ತಿಳಿಸುವ ಸಲುವಾಗಿ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಹಾಗೂ ಸಮತೋಲನ ಆಹಾರ ನೀಡುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದಾಗಿದೆ.
ಮಧುಮೇಹ ಬರೀ ರಕ್ತ ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶ್ಚಕ್ತಿ ಮಾಡುವುದಷ್ಟೇ ಅಲ್ಲದೇ, ಮಧುಮೇಹದಿಂದ ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡಕ್ಕೆ ಹನಿ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ.
ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹಿಗಳಿದ್ದಾರೆ. ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣದಲ್ಲಿ ಕಡಿಮೆಯಾಗುವುದರಿಂದ ರಕ್ತದಲ್ಲಿರುವ ಸಿಹಿ ಅಂಶವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಕಷ್ಟವಾಗುವ ಪರಿಸ್ಥಿತಿ ಎದುರಾಗುತ್ತದೆ.
ಮಕ್ಕಳಿಂದ ಹಿಡಿದು ಯಾವುದೇ ವಯೋಮಾನದವರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅತಿ ಹೆಚ್ಚು ಅರುವತ್ತಕ್ಕೆ ಮೇಲ್ಪಟ್ಟವರಲ್ಲೇ ಮಧುಮೇಹ ಹೆಚ್ಚಾಗಿ ಬಾಧಿಸಲ್ಪಡುತ್ತಿದೆ. ಇನ್ಸುಲಿನ್ ಉತ್ಪತ್ತಿ ಸ್ಥಗಿತವಾದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ವಿಭಜನೆಗೊಳ್ಳುವುದಿಲ್ಲ. ಇದನ್ನೇ ಮಧುಮೇಹ ಎನ್ನುತ್ತೇವೆ.
ಇತ್ತೀಚಿನ ದಿನಗಳಲ್ಲಿ ಒಂದನೇ ಹಂತದ ಮಧುಮೇಹ ಸಾಮಾನ್ಯವಾಗಿ ನಿಯಂತ್ರಣದಲ್ಲಿಡಬಹುದು. ಆದರೆ ಎರಡನೇ ಹಂತದ ಮಧುಮೇಹಕ್ಕೆ ಕಾಲಕಾಲಕ್ಕೆ ತಪಾಸಣೆ ಅಗತ್ಯವಾಗಿದೆ.
ವೈದ್ಯರೊಂದಿಗೆ ನಿಮ್ಮ ಕಾಯಿಲೆಯ ಪೂರ್ಣ ವಿವರಗಳನ್ನು ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯ ಬೇಕಿದೆ. ಔಷಧಿಯೊಂದಿಗೆ ಆಹಾರ ಪದ್ದತಿಯು ಅತಿ ಮುಖ್ಯವಾಗುತ್ತದೆ. ಮಧುಮೇಹದ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡು ಮುಂಜಾಗ್ರತೆ ವಹಿಸಿದರೆ ಮಾತ್ರ ರೋಗ ನಿಯಂತ್ರಣದಲ್ಲಿಡಬಹುದು ಎಂದರು.
ಶ್ರೀ ರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯ್ ಕುಮಾರ್ ಮಾತನಾಡಿ, ಜೀವನದ ಎಲ್ಲಾ ಹಂತಗಳಲ್ಲಿ ಮಧುಮೇಹ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಮಧುಮೇಹ ನಿರ್ವಹಣೆಯ ಪ್ರಾಮುಖ್ಯತೆ ಹಾಗೂ ಬದ್ದತೆಯನ್ನು ಒತ್ತಿ ಹೇಳುವುದಾಗಿದೆ.
ಶುಶ್ರೂಷಾ ವಿದ್ಯಾರ್ಥಿಗಳು ಮತ್ತು ಭವಿಷ್ಯದ ಆರೋಗ್ಯ ವೃತ್ತಿಪರರಾಗಿ, ಇದನ್ನು ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸುತ್ತೀರಿ. ಮಧುಮೇಹ, ಅದರ ಅಪಾಯಗಳು ಮತ್ತು ನಿರ್ವಹಣೆಯ ಬಗ್ಗೆ ನಮಗೆ ಮತ್ತು ಇತರರಿಗೆ ಶಿಕ್ಷಣ ನೀಡೋಣ.
ಮಧುಮೇಹದಿಂದ ಬಳಲುತ್ತಿರುವವರನ್ನು ಬೆಂಬಲಿಸೋಣ, ಕಾಳಜಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ನೀಡೋಣ. ಎಲ್ಲರಿಗೂ ಮಧುಮೇಹ ಆರೈಕೆಯ ಪ್ರವೇಶವನ್ನು ಸುಧಾರಿಸುವ ನೀತಿಗಳು ಮತ್ತು ಉಪಕ್ರಮಗಳಿಗಾಗಿ ನಾವು ಪ್ರತಿಪಾದಿಸೋಣ ಎನ್ನುವ ಸಂಕಲ್ಪ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ವೈದ್ಯೆ ಡಾ.ಮಾಲಾ ವಿಜಯಕುಮಾರ್, ಮತ್ತಿತರರು ಭಾಗವಹಿಸಿದ್ದರು.