ದೊಡ್ಡಬಳ್ಳಾಪುರ: ಕಳೆದ ಶನಿವಾರ ತಾಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ದೊರೆತ 5 ದಿನಗಳ ನವಜಾತ ಶಿಶುವಿನ ಜೀವ ಉಳಿಸಲು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು (Government doctors’ efforts) ನಡೆಸಿದ ಹರಸಾಹಸ ಯಶಸ್ವಿಯಾಗಿದೆ.
ಕಳೆದ ಶನಿವಾರದ ಹಾಡೋನಹಳ್ಳಿಯ ಖಾಸಗಿ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿದ ಸ್ಥಳೀಯ ನಿವಾಸಿಗಳು. ಹುಡುಕಾಟ ನಡೆಸಿದ್ದು ಸುಮಾರು 5 ದಿನಗಳ ಮಗುವನ್ನು ರಕ್ಷಿಸಿ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದರಿ.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು, ನಗರದ ತಾಯಿ-ಮಗು ಆಸ್ಪತ್ರೆಗೆ ದಾಖಲಿಸಿದ್ದರು.
ತೀವ್ರ ನಿತ್ರಾಣವಾಗಿದ್ದ ಮಗುವಿನ ಜೀವ ಉಳಿಸಲು ಸರ್ಕಾರಿ ತಾಯಿ-ಮಗು ಆಸ್ಪತ್ರೆಯ ವೈದ್ಯರಾದ (Government Doctors) ಡಾ.ಸವಿತಾ, ಡಾ.ಗಾಯತ್ರಿ ಅವರು ಅವಿರತ ಶ್ರಮಿಸಿದರು.
ನವಜಾತ ಗಂಡು ಮಗು ಕೇವಲ 1 ಕೆಜಿ 800 ಗ್ರಾಂ ತೂಕವಿದ್ದು, ವೈದ್ಯರಿಗೆ ಮಗುವಿನ ಜೀವ ಉಳಿಸುವುದು ಸವಾಲಿನ ಕಾರ್ಯವಾಗಿತ್ತು.
ದತ್ತು ಕೇಂದ್ರಕ್ಕೆ ರವಾನೆ
ಈ ಕುರಿತಂತೆ ಅತೀವ ಕಾಳಜಿ ವಹಿಸಿದ ಡಾ.ಸವಿತಾ, ಡಾ.ಗಾಯತ್ರಿ ಅವರು ಆಸ್ಪತ್ರೆಯಲ್ಲಿ ಪ್ರಸೂತಿಯಾಗಿದ್ದ ತಾಯಂದಿರಿಗೆ ಮನವಿ ಮಾಡಿ, ಈ ಮಗು ಹಾಲುಣಿಸಲು ಒಪ್ಪಿಸಿದ್ದು, ಜೊತೆ ಪೌಡರ್ ಹಾಲನ್ನು ಕೂಡ ಮಗುವಿಗೆ ರೂಡಿ ಮಾಡಿದರು.
ಕಳೆದ 8 ದಿನಗಳಿಂದ ಮಗುವಿನ ಹಾರೈಕೆ ಮಾಡಿದ ವೈದ್ಯರು, ಸುಮಾರು 2 ಕೆಜಿ30 ಗ್ರಾಂ ತೂಕವಾದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ದತ್ತು ಕೇಂದ್ರದ ಉಸ್ತುವಾರಿಯನ್ನು ಕರೆಸಿ ಅವರಿಗೆ ಮಗುವಿನ ಹಾರೈಕೆಯ ತರಬೇತಿ ನೀಡಿದರು.
ಅಂತಿಮವಾಗಿ ಇಂದು ವೈದ್ಯರಾದ ಡಾ.ಸವಿತಾ, ಡಾ.ಗಾಯತ್ರಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ದತ್ತು ಕೇಂದ್ರದ ಕಾರ್ಯಕರ್ತೆ ಹೇಮಾ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಮುಂದೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವ ಅಧಿಕಾರಿಗಳು ದತ್ತು ಪಡೆಯಲು ಅರ್ಜಿ ಸಲ್ಲಿಸಿರುವ ಪೋಷಕರಿಗೆ ಈ ಮಗುವನ್ನು ಹಸ್ತಾಂತರ ಮಾಡಲಿದ್ದಾರೆಂದು ತಿಳಿದು ಬಂದಿದೆ.