ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ (Kashi Vishwanath Temple) ಕೊನೆಯ ಕಾರ್ತಿಕ ಸೋಮವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗಿನ ಜಾವ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಅಲಂಕಾರಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯಾಯಿತು. ನಂತರ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಸಾಯಂಕಾಲ ಲಕ್ಷದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಹ ಆಯೋಜಿಸಿಲಾಗಿತ್ತು.
ಹಿಂದೂಗಳಲ್ಲಿ ಕಾರ್ತಿಕ ಮಾಸವು ಶ್ರೇಷ್ಠ ಮಾಸವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಕಾರ್ತಿಕ ಸೋಮವಾರಗಳಿಗೆ ಮಹತ್ವ ಹೆಚ್ಚು. ಆದ್ದರಿಂದ ಹೆಚ್ಚಿನ ಭಕ್ತರು ದಿನಪೂರ್ತಿ ಉಪವಾಸವಿದ್ದು, ಸಂಜೆ ಶಿವನ ದರ್ಶನ ಪಡೆದು ಲಕ್ಷದೀಪೋತ್ಸವದಲ್ಲಿ ಭಾಗವಹಿಸುವ ಮೂಲಕ ತಮ್ಮ ಸೋಮವಾರವನ್ನು ಪವಿತ್ರಗೊಳಿಸುವರು.
ಸುತ್ತಮುತ್ತಲಿನ ಗ್ರಾಮಗಳಿಂದಲೂ ಅನೇಕ ಭಕ್ತರು ಆಗಮಿಸಿ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.