ಧರ್ಮಸ್ಥಳ: ಮಂಜುನಾಥ ಸ್ವಾಮಿಯ ರೂಪದಲ್ಲಿ ಇರುವ ಶಿವ, ಜೈನರ ಆಡಳಿತ ಮತ್ತು ವೈಷ್ಣವ ಸಂಪ್ರದಾಯದ ಅರ್ಚಕರನ್ನು ಒಳಗೊಂಡಿರುವ ಧರ್ಮಸ್ಥಳ ಕ್ಷೇತ್ರವು ವಸುಧೈವ ಕುಟುಂಬಕಂ ಎನ್ನುವ ಭಾರತೀಯ ತಾತ್ತ್ವಿಕತೆ ಮತ್ತು ನಮ್ಮಲ್ಲಿರುವ ಧಾರ್ಮಿಕ ವೈವಿಧ್ಯಕ್ಕೆ ನಿದರ್ಶನವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ (M.B. Patil ) ಮಂಗಳವಾರ ಹೇಳಿದ್ದಾರೆ.
ಧರ್ಮಸ್ಥಳ ದೇವಸ್ಥಾನದ ವತಿಯಿಂದ ಏರ್ಪಡಿಸಿದ್ದ 92ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಲಕ್ಷ ದೀಪೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಧರ್ಮ ಮತ್ತು ಲಿಂಗಾಯತ ಧರ್ಮ ಎರಡೂ ಅಹಿಂಸೆ ಮತ್ತು ದಯೆಯನ್ನು ಪ್ರತಿಪಾದಿಸುತ್ತವೆ. ಜೈನ ಧರ್ಮವು ಭಾರತದ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆಗಳು ಉಜ್ಜ್ವಲವಾಗಿವೆ. ಧಾರ್ಮಿಕ ವೈವಿಧ್ಯವೇ ಭಾರತದ ಶಕ್ತಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರದಿಂದ ಸಮಾಜಸೇವೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಅನ್ನ ದಾಸೋಹ, ಪರಿಸರ ಸಂರಕ್ಷಣೆ, ಜಲಮೂಲಗಳ ಪುನರುಜ್ಜೀವನ ಇತ್ಯಾದಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಆರಂಭಿಸಿರುವ ಶಿಕ್ಷಣ ಸಂಸ್ಥೆಗಳು ತಾವಿರುವ ಪ್ರದೇಶದಲ್ಲಿ ಮೌನಕ್ರಾಂತಿಯನ್ನೇ ನಡೆಸಿಕೊಂಡು ಬಂದಿವೆ ಎಂದು ಅವರು ಮೆಚ್ಚುಗೆ ಸೂಸಿದ್ದಾರೆ.
ಹಿಂದೂ, ಲಿಂಗಾಯತ, ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮಗಳೆಲ್ಲವೂ ಮಾನವೀಯತೆಯನ್ನೇ ಪ್ರತಿಪಾದಿಸುತ್ತವೆ. ಇವು ಹೇಳುವ ಮೌಲ್ಯಗಳನ್ನು ನಾವು ಯುವಜನರಿಗೆ ದಾಟಿಸಬೇಕು. ಇಡೀ ವಿಶ್ವವೇ ಒಂದು ಪರಿವಾರವಿದ್ದಂತೆ ಎನ್ನುವುದನ್ನು ನಾವು ಸಮಾಜದಲ್ಲಿ ರೂಢಿಸಬೇಕು. ಅದು ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳದ ಮೂಲಕ ನಡೆಯುತ್ತಿರುವ ಸೇವಾ ಚಟುವಟಿಕೆಗಳು ಸಮಾಜದ ಬಲವರ್ಧನೆಗೆ ಕಾರಣವಾಗಿವೆ. ಈ ಸತ್ಪರಂಪರೆ ಅವಿಚ್ಛಿನ್ನವಾಗಿ ಮುಂದುವರಿಯಲಿ. ವಿಜಯಪುರದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಮಾಡಿರುವ ಪುಣ್ಯದ ಕೆಲಸಗಳಂತೆಯೇ ಹೆಗ್ಗಡೆಯವರ ಕಾರ್ಯಗಳು ಕೂಡ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತಿವೆ ಎಂದು ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಶಾಸಕ ಹರೀಶ್ ಪೂಂಜಾ, ಸುರೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.