ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ಪ್ರಸಿದ್ಧ ಐಬೊಮ್ಮ (iBomma) ಮತ್ತು ಬೊಪ್ಪಮ್ (Bappam) ಎಂಬ ಸಿನಿಮಾ ಪೈರಸಿ ಜಾಲದ ಮುಖ್ಯಸ್ಥನನ್ನು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಮೂರು ದಿನಗಳ ಹಿಂದೆ ಬಂಧಿಸಿದ್ದಾರೆ. ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಐಬೊಮ್ಮ ಮಾಸ್ಟರ್ ಮೈಂಡ್ ಇಮ್ಮಂಡಿ ರವಿ ಬಂಧಿತ ಆರೋಪಿಯಾಗಿದ್ದು, ಈತನ ಬಂಧಿಸಿರುವ ಪೊಲೀಸರು ಬಹುಭಾಷಾ ಚಲನಚಿತ್ರಗಳ ಸುಮಾರು 21,000 ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರವಿ ಬಂಧನವನ್ನು ತೆಲುಗು ಸಿನಿಮಾರಂಗ ವಿಜಯೋತ್ಸವ ಎಂಬಂತೆ ಸಂಭ್ರಮಿಸುತ್ತಿದ್ದರೆ, ಪೊಲೀಸ್ ಇಲಾಖೆ ದೊಡ್ಡ ಸಾಧನೆ ಎಂಬಂತೆ ಹಿರೋಯಿಸಮ್ ಮೆರೆಯುತ್ತಿದೆ.
ಐಬೊಮ್ಮ ರವಿ ಮಾಡಿದ್ದು ತಪ್ಪು.. ಆದರೆ..?
ಐಬೊಮ್ಮ ರವಿ ಮಾಡಿದ್ದು ಖಂಡಿತವಾಗಿ ತಪ್ಪು, ಈ ರೀತಿ ಯಾರೂ ಮಾಡಬಾರದು, ಪೈರೆಸಿ ನಿಷೇಧವಿದ್ದು, ಇದೂ ಕಾನೂನು ಬಾಹಿರ ಕಾರ್ಯ. ಪೈರೆಸಿ ಸಿನಿಮಾ ಇಂಡಸ್ಟ್ರೀಗೆ ದೊಡ್ಡ ಶಾಪವಾಗಿದ್ದು, ಸಿನಿ ರಂಗಕ್ಕೆ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆತನ ಬಂಧನವಾಗಿದೆ ಅದು ಸರಿ.
ಆದರೆ ಈ ರೀತಿ ಪೈರೆಸಿ ಮಾಡಿದ ಆರೋಪದ ಮೇಲೆ ಐಬೊಮ್ಮ ರವಿ ಬಂಧನದ ಕುರಿತು ಸಮಾಜ ನೋಡುತ್ತಿರುವ ದೃಷ್ಟಿಕೋನವನ್ನು ಆಲೋಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸಮಾಜ ನೋಡುತ್ತಿರುವ ದೃಷ್ಟಿಕೋನವನ್ನು ಪೈರೆಸಿಯಿಂದ ತೊಂದರೆಗೆ ಒಳಗಾದ ಚಿತ್ರರಂಗ, ಪೊಲೀಸ್ ಇಲಾಖೆ ಹಾಗೂ ಸರ್ಕಾರ ತ್ವರಿತವಾಗಿ ಗಮನಿಸಬೇಕಾಗುವ ಸನ್ನಿವೇಶ ಎದುರಾಗಿದೆ.
ಹೀರೋ ಆದ ಐಬೊಮ್ಮ ರವಿ.!
ಇನ್ನೂ ಐಬೊಮ್ಮ ರವಿ ಬಂಧನದ ಕುರಿತು ಸಮಾಜ ನೋಡುತ್ತಿರುವ ದೃಷ್ಟಿಕೋನ ಏನು ಎಂದು ಗಮನಿಸುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಬಂಧಿತ ಐಬೊಮ್ಮ ರವಿಗೆ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಆತನನ್ನು ಮಧ್ಯಮ ವರ್ಗದ ದೇವರು ಎಂಬಂತೆ ಸಾಮಾಜಿಕ ಜಾಲತಾಣ ಎಕ್ಸ್, ಫೇಸ್‌ಬುಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಬೆಂಬಲಕ್ಕೆ ನಿಲ್ಲಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಅಂಸಖ್ಯಾತ ಮಂದಿ ಐಬೊಮ್ಮ ರವಿ ಮಾಡಿದ ತಪ್ಪೇನು.? ಎಂದು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಎಕ್ಸ್ ಖಾತೆ, ಆತನ ಬಂಧನದ ವರದಿ ಮಾಡಿರುವ ಅನೇಕ ಮಾಧ್ಯಮಗಳ ಸುದ್ದಿಗಳಲ್ಲಿ ಕಾಮೆಂಟ್ ಗಮನಿಸಿದರೆ ಅನೇಕರು ಐಬೊಮ್ಮ ರವಿ ಪರ ಬೆಂಬಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ, ಬಡವರಿಗೆ ಒಳಿತು ಮಾಡಿದ್ದು ಆತನ ತಪ್ಪೆ.? ಎಂಬಂತ ಪ್ರಶ್ನೆ ಮಾಡುತ್ತಿದ್ದಾರೆ.
ಅನೇಕರು ತಮ್ಮ ವಯಕ್ತಿಕ ಫೇಸ್‌ಬುಕ್, ಎಕ್ಸ್ ಖಾತೆಯಲ್ಲಿ ಐಬೊಮ್ಮ ರವಿ ಪರ ಪೋಸ್ಟ್ ಮಾಡುವ ಮೂಲಕ ಬಂಧನವನ್ನು ಖಂಡಿಸುತ್ತಿದ್ದು, ಅನೇಕ ಮೀಮ್ಸ್ ವೈರಲ್ ಆಗಿದೆ.
ಇದು ಯಾವ ಮಟ್ಟಕ್ಕೆ ಎಂದರೆ ಸ್ವತಃ ಪೊಲೀಸ್ ಕಮಿಷನರ್ ವಿಸಿ ಸಜ್ಜರ್ ಅವರು ಸುದ್ದಿಗೋಷ್ಠಿಯಲ್ಲಿ, ಪೊಲೀಸರ ಕರ್ತವ್ಯವನ್ನು ಅವಹೇಳನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ.
ಸಾಮಾನ್ಯವಾಗಿ ತಪ್ಪ ಮಾಡಿದವರ ಪರ, ಅಪರಾಧಿಗಳ ಪರ ಸಮಾಜ ದನಿ ಎತ್ತುವುದು ಕಡಿಮೆ. ಆದರೆ ಐಬೊಮ್ಮ ರವಿ ವಿಚಾರದಲ್ಲಿ ನಟರಾದ ರಜಿಕಾಂತ್ ಸಿನಿಮಾ ಶಿವಾಜಿ, ಚಿರಂಜೀವಿ ಸಿನಿಮಾ ಠಾಕೂರ್, ರವಿತೇಜ ಸಿನಿಮಾ ಕಿಕ್ ಮುಂತಾದ ಸಿನಿಮಾಗಳ ಸನ್ನಿವೇಶದ ವಿಡಿಯೋ ಬಳಸಿ, ರವಿ ತಪ್ಪು ಮಾಡಿದ್ದು ಜನಸಾಮಾನ್ಯರಿಗಾಗಿ ಎಂದು ಆತನ ಪರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗುತ್ತಿದ್ದು, ಅವುಗಳಿಗೆ ವ್ಯಾಪಕ ಬೆಂಬಲ ದೊರೆತು, ತೀವ್ರಗತಿಯಲ್ಲಿ ವೈರಲ್ ಆಗುತ್ತಿವೆ.
ಚಿತ್ರರಂಗ, ಸರ್ಕಾರದ ವಿರುದ್ಧ ಕಿಡಿ
ಐಬೊಮ್ಮ ರವಿ ವಿಚಾರದಲ್ಲಿ ಅನೇಕರು ಆತನ ತಪ್ಪೇನು..? ಆತ ಮಾಡಿದಕ್ಕೆ ಕಾರಣವೇನು.? ಎಂದು ಪ್ರಶ್ನಿಸಿದ್ದು, ಇದಕ್ಕೆ ಮುಖ್ಯ ಕಾರಣ ಚಿತ್ರರಂಗ, ಸರ್ಕಾರ ಅಲ್ಲವೇ ಎಂದು ಬಹಿರಂಗವಾಗಿ, ಮುಕ್ತವಾಗಿ ಪ್ರಶ್ನೆ ಮಾಡುತ್ತಿದ್ದಾರೆ.
ಚಿತ್ರರಂಗ ಕಾರಣವೋ, ಸರ್ಕಾರ ಕಾರಣವೋ ಹೊರಬರುತ್ತದೆ. ಆದರೆ ಐಬೊಮ್ಮ ರವಿ ಬಂಧನದ ಕುರಿತು ನೆಟ್ಟಿಗರು ಕೆರಳಿರುವ ರೀತಿ ಕನಿಷ್ಠ ಚಿಂತಿಸುವಂತೆ ಮಾಡಿದೆ.
ಗಂಭೀರ ವಿಷಯ ಚರ್ಚೆಗೆ
ಸಾಮಾನ್ಯವಾಗಿ ಪ್ರಸ್ತುತ ಕುಟುಂಬ ಸಹಿತ ಸಿನಿಮಾ ನೋಡಲು ತೆರಳಿದರೆ, 2, 3, 4, 5 ಸಾವಿರ ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಿನಿಮಾ ಟಿಕೆಟ್‌ಗೆ ನೀಡುವ ದರಕ್ಕಿಂತ ಚಿತ್ರಮಂದಿರಗಳಲ್ಲಿನ ಪಾಪ್ ಕಾರ್ನ್, ತಂಪು ಪಾನೀಯಗಳ ದರ ವಿಪರೀತವಾಗಿದೆ.
ಇನ್ನೂ ಅದೇ ಸಿನಿಮಾ ನೋಡಲು ಮಾಲ್‌ಗಳಿಗೆ ತೆರಳಿದರೆ ಮುಗಿದೇ ಹೋಯಿತು. ಅಲ್ಲಿನ ಎಕ್ಸಲೇಟರ್, ಎಸಿ ಚಾರ್ಜ್ ಕೂಡ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಬರುವ ವೀಕ್ಷಕರ ತಲೆ ಕಟ್ಟಲಾಗುತ್ತಿದೆ. ಈ ಮೂಲಕ ಮಧ್ಯವರ್ಗದ ಕುಟುಂಬ ಒಂದು ಸಿನಿಮಾ ನೋಡಿ ಬಂದರೆ, ಮತ್ತೆ ಸಿನಿಮಾ ನೋಡಲು ತೆರಬೇಕೆಂದರೆ ಭಯ ಪಡುವ ಪರಿಸ್ಥಿತಿ ಸೃಷ್ಟಿಸಲಾಗಿದೆ.
ಇದರ ಜೊತೆಗೆ ನೆಚ್ಚಿನ ನಟರ ನೂತನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ನಿರ್ಮಾಣ ಸಂಸ್ಥೆ ಬೇಕಾದಂತೆ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅವಕಾಶ ನೀಡಿ ಬಡವರನ್ನು, ಮಧ್ಯಮ ವರ್ಗದ ಸಿನಿ ಪ್ರೇಮಿಗಳನ್ನು ಚಿತ್ರಗಳಿಂದ ದೂರ ಮಾಡಲಾಗುತ್ತಿದೆ.
ಇಂತವರಿಗೆಲ್ಲರಿಗೂ ಐಬೊಮ್ಮ ರವಿ ಅದೇ ಗುಣಮಟ್ಟದ ಸಿನಿಮಾವನ್ನು ಉಚಿತವಾಗಿ ನೋಡಲು ಅವಕಾಶ ಕಲ್ಪಿಸಿದ್ದಾರೆ. ನಿಮ್ಮ ದೃಷ್ಟಿಯಲ್ಲಿ ರವಿ ಮಾಡಿದ್ದು ತಪ್ಪೇ ಆದರೆ, 50, 60 ಜನರ ಸಿನಿಮಾ ಎಂಬ ವ್ಯಾಪಾರಕ್ಕಾಗಿ ಕೋಟ್ಯಾಂತರ ಜನ ಸಾಮಾನ್ಯರಿಂದ ಲೂಟಿ ಮಾಡುವುದು ಎಷ್ಟು ಸರಿ..? ಚಿತ್ರರಂಗದವರ ನೂರಾರು ಕೋಟಿ ಲಾಭಕ್ಕಾಗಿ ಬಡವರಿಗೆ ಬರೆ ಎಳೆಯುವುದು ಎಷ್ಟು ಸರಿ..? ಕೂಲಿ ಮಾಡುವವನ ಜೇಬಿನಿಂದ ಬಲವಂತವಾಗಿ ಹಣ ಪೀಕುವುದು ಎಷ್ಟು ಸರಿ..? ಎನ್ನುತ್ತಿದ್ದಾರೆ.
ಮಧ್ಯಮ ವರ್ಗದರಿಗೂ ಸಿನಿಮಾ ದೂರ
ಚಿತ್ರರಂಗ, ಸರ್ಕಾರದ ಈ ನೀತಿಯಿಂದ ಬಡವರು ಮಾತ್ರವಲ್ಲ, ಮಧ್ಯಮ ವರ್ಗದ ಮಂದಿಗೆ ಸಿನಿಮಾ ನೋಡಬೇಕಾದರೆ ಹಿಂದೆ ಮುಂದೆ ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಸಂಪೂರ್ಣ ಇಲ್ಲವಾಗಿಸಿ, ಮಲ್ಟಿಪ್ಲೆಕ್ಸ್ ಥಿಯೇಟರ್ ತೆರೆದು, ಅಲ್ಲಿಗೆ ಬಂದವರಿಗೆ ವಿವಿಧ ರೀತಿಯ ಕಾರಣಗಳ ಮೂಲಕ ಜೀಬಿಗೆ ಕತ್ತರಿ ಹಾಕಲಾಗುತ್ತದೆ.
ಇದರಿಂದ ಆ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಮಕ್ಕಳು ಸಿನಿಮಾಗೆ ಕರ್ಕೊಂಡ್ ಹೋಗಿ ಎಂದರೆ ಆಲೋಚನೆ ಮಾಡಬೇಕಾದ ಸಂದರ್ಭ ಸೃಷ್ಟಿಸಿದ್ದಾರೆ. ಈ ಕಾರಣಗಳಿಂದ ಇಂಟರ್ನೆಟನಲ್ಲಿ ಉಚಿತವಾಗಿ ಸಿನಿಮಾ ನೋಡುವ ಪರಿಸ್ಥಿತಿ ಬಂದಿದೆ.
ಐಬೊಮ್ಮ ರವಿಯನ್ನು ಬಂಧಿಸಲಾಗಿದೆ. ಆದರೆ ಐಬೊಮ್ಮ, ಬೊಪ್ಪಮ್ ಮೂಲಕ ಲಕ್ಷಾಂತರ ಮಂದಿ ಸಿನಿಮಾ ನೋಡಿದ್ದಾರೆ. ಅವರನ್ನು ಏನು ಮಾಡಲು ಸಾಧ್ಯ.? ಆತ ಅಲ್ಲಿ ಪೋಸ್ಟ್ ಮಾಡಿದ್ದು ತಪ್ಪೇ ಆದರೆ, ನೋಡಿದವರದ್ದು ತಪ್ಪೆ ಅಲ್ಲವೇ. ಹಾಗಾದರೆ ನಮ್ಮನ್ನು ಬಂಧಿಸಿ, ನಮ್ಮನ್ನು ಜೈಲಿನಲ್ಲಿಡಿ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಐಬೊಮ್ಮ ರವಿ ಬಂಧನದ ಕುರಿತು 40, 50 ಮಂದಿ ಸಿನಿಮಾ ಮಂದಿ ಸಂಭ್ರಮಿಸುತ್ತಿದ್ದಾರೆಯೇ ಹೊರತು. ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರು ಸಂಭ್ರಮಿಸುವ ಪರಿಸ್ಥಿತಿಯಂತೂ ಕಾಣುತ್ತಿಲ್ಲ. ಏಕೆಂದರೆ ಅವರುಕೂಡ ಕುಟುಂಬ ಸಮೇತ ಮಲ್ಟಿಪ್ಲೆಕ್ಸ್‌ಗೆ ತೆರಳಿ ಅವರು ಕೆಲಸ ಮಾಡಿದ ಸಿನಿಮಾ ನೋಡಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಕೋಟ್ಯಾಂತರ ರೂ ಖರ್ಚು ಮಾಡಿ, ಗುಣಮಟ್ಟದ ಸಿನಿಮಾ ಎಂದು ಸಿನಿ ಪ್ರೇಮಿಗಳನ್ನು ಬಲಿಪಶು ಮಾಡುವುದು ಎಷ್ಟು ಸರಿ..? ಕಡಿಮೆ ಬಜೆಟ್ ಸಿನಿಮಾಗಳು ಹಿಟ್ ಆಗಿಲ್ಲವೇ..? ನಿಮ್ಮ ಪ್ರತಿಷ್ಠೆಗಾಗಿ ಕೋಟ್ಯಾಂತರ ಖರ್ಚು ಮಾಡಿ ನಮ್ಮ ಮೇಲೆ ಹೊರೆ ಏಕೆ ಹೊರೆಸುತ್ತೀರಿ..? ಎಂಬ ಪ್ರಶ್ನೆ ನೆಟ್ಟಿಗರದ್ದು
ನಿಮ್ಮಂತವರಿಂದ (ಚಿತ್ರರಂಗ, ಸರ್ಕಾರಗಳು) ಉಂಟಾಗುತ್ತಿರುವ ಸಮಸ್ಯೆಗೆ ಐಬೊಮ್ಮ ರವಿ ಅಂತವರು ಪರಿಹಾರ ಅಲ್ಲವೇ ? ಐಬೊಮ್ಮ ಟಿವಿ ಒಂದು ಜನಸಾಮಾನ್ಯನಿಗೆ ರಿಲೀಫ್ ಅಲ್ಲವೇ.? ಎಂಬ ಗಂಭೀರ ಚರ್ಚೆ ನಡೆಯುತ್ತಿದೆ.
ಸರ್ಕಾರಗಳು ಬಡ, ಮಧ್ಯಮ ವರ್ಗದ ಜನರಿಗೆ ತೊಂದರೆ ಉಂಟು ಮಾಡುವ ಚಿತ್ರರಂಗದ ಮೇಲೆ ಕಡಿವಾಣ ಹಾಕಬೇಕಿದೆ. ಕೋಟ್ಯಾಂತರ ಖರ್ಚು ಎನ್ನುವವರಿಗೆ ಜಿಎಸ್ಟಿ ತೆರಿಗೆ ಹಾಕಬೇಕಿದೆ. ಅಲ್ಲದೆ ಸಿನಿ ಪ್ರಿಯರನ್ನು ದೋಚಬಾರದು ಎಂಬ ಪ್ರಜ್ಞೆ ಚಿತ್ರರಂಗಕ್ಕೂ ಇರಬೇಕಿದೆ.
ಐಬೊಮ್ಮ ರವಿ ಬಂಧನ ಬೆನ್ನಲ್ಲೇ ಆತನ ಪರ ಅನೇಕರು ಬಹಿರಂಗವಾಗಿ ಮಧ್ಯಮ ವರ್ಗದ ದೇವರು, ರಾಬಿನ್ ಹುಡ್ ಎಂಬಂತೆ ಆತನಿಗೆ ಬೆಂಬಲ ನೀಡುತ್ತಿದ್ದಾರೆ. ಆತನಿಗೆ ಇಷ್ಟು ಬೆಂಬಲ ಏಕೆ ದೊರಕುತ್ತಿದೆ…? ಎಂಬುದನ್ನು ಸರ್ಕಾರ, ಚಿತ್ರರಂಗ ಚಿಂತಿಸಬೇಕಿದೆ.
ಐಬೊಮ್ಮ ರವಿ ಮಾಡಿದ್ದು ತಪ್ಪೇ ಆದರೆ. ಅಂತೆಯೆ ಸಿನಿ ಪ್ರಿಯರ ದೋಚುವವರಿಗೂ ಕಡಿವಾಣ ಹಾಕಲು ಸರ್ಕಾರ, ಚಿತ್ರರಂಗ ಕಠಿಣ ಕ್ರಮ ಕೈಗೊಂಡು, ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕಿದೆ ಎಂಬುದು ಒಕ್ಕೊರಲ ಆಗ್ರಹವಾಗಿ ಕಂಡುಬರುತ್ತಿದೆ.
ಸೂಚನೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋಗಳನ್ನು ಮಾತ್ರ ಶೇರ್ ಮಾಡಲಾಗಿದೆ. ಈ ವಿಡಿಯೋಗಳಿಗೂ ಹರಿತಲೇಖನಿಗೂ ಯಾವುದೇ ಸಂಬಂಧವಿಲ್ಲ.