ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಚಿಪ್ಸ್, ಬರ್ಗರ್, ಫ್ರೆಂಚ್ ಫ್ರೈಸ್ ಮತ್ತಿತರ ಅಲ್ಟ್ರಾ ಪ್ರೋಸೆಸ್ ಆಹಾರ (Ultra-processed food ) ಪದಾರ್ಥಗಳನ್ನು ಗಬಗಬ ತಿನ್ನುವವರು ಈ ವರದಿಯನ್ನೊಮ್ಮೆ ಓದಬೇಕಿದೆ. ಏಕೆಂದರೆ ಈ ಪದಾರ್ಥಗಳು ತಮ್ಮ ಶರೀರವನ್ನು ತಿನ್ನುತ್ತಿದೆ ಎಂಬ ವಾಸ್ತವ ಅರ್ಥ ಮಾಡಿಕೊಳ್ಳಬೇಕಿದೆ ಎಂಬ ಆತಂಕಕಾರಿ ವರದಿ ಮತ್ತೆ ಪ್ರಕಟವಾಗಿದೆ.
ಈ ವರದಿ ಓದುಗರನ್ನು ಭಯ ಪಡಿಸಲು ಮಾಡುತ್ತಿಲ್ಲ. ಬದಲಿಗೆ ಅವರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಕಟಿಸಲಾಗುತ್ತಿದೆ.
ಕಂಪನಿಗಳು ನೀಡುವ ತರಾವರಿ ಜಾಹೀರಾತು, ಕೋಟ್ಯಾಂತರ ಸಂಭಾವನೆ ಪಡೆದು ಆಕರ್ಷಣೆಯ ಜಾಹಿರಾತು ನೀಡುವ ಸಿನಿಮಾ ನಟರಿಗೆ ಸ್ಪರ್ಧೆ ನೀಡಿ, ನಮ್ಮ ಈ ವರದಿ ನಿಮಗೆ ಎಷ್ಟು ಆರೋಗ್ಯದ ಅರಿವನ್ನು ಉಂಟುಮಾಡುತ್ತದೆ ಎಂಬ ವಾಸ್ತವ ನಮಗೆ ತಿಳಿದಿದೆ. ಆದಾಗ್ಯೂ ಕೆಲವೊಂದು ವಾಸ್ತವ ತೆರೆದಿಡುವುದು, ಓದುಗರನ್ನು ಜಾಗೃತರನ್ನಾಗಿಸುವುದು ನಮ್ಮ ಕರ್ತವ್ಯ.
ಬಿಡಿ ಈಗ ವಿಷಯಕ್ಕೆ ಬರೋದಾರೆ, ಅಲ್ಟ್ರಾ ಪ್ರೋಸೆಸ್ ಆಹಾರ ತಿನ್ನುವುದರಿಂದ ಮಕ್ಕಳಿಂದ ದೊಡ್ಡವರವರೆಗೂ ಬೊಜ್ಜು ತೀವ್ರವಾಗಿ ಹೆಚ್ಚುತ್ತಿದೆ. ಹೃದಯಾಘಾತದ ಕಾಯಿಲೆ ವ್ಯಾಪಿಸುತ್ತಿದೆ. ಇನ್ನೂ ಡಯಾಬಿಟಿಸ್ ಟೈಪ್ 2, ಬಿಪಿಯ ಏರಿಳಿತ ಬಗ್ಗೆ ಹೇಳುವುದೆ ಬೇಡವಾಗಿದ್ದು, ಕಿಡ್ನಿಯ ಸಮಸ್ಯೆ ಹೆಚ್ಚಳ ಆತಂಕಕಾರಿ ಮಟ್ಟಕ್ಕೆ ತಲುಪಿದೆ.
ಹಣ ಬಲ
ಅತಿ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಉಂಟಾಗುವ ಅಪಾಯದ ಬಗ್ಗೆ ಚರ್ಚೆ ಯಾವಾಗ ಮುನ್ನೆಲೆಗೆ ಬಂದರೂ, ಇವುಗಳನ್ನು ತಯಾರು ಮಾಡುವ ಸಂಸ್ಥೆಗಳು ತಮ್ಮ ಹಣ ಬಲದ ಮೂಲಕ ವಿಷಯಾಂತರ ಮಾಡಲು ಕೋಟ್ಯಾಂತರ ರೂ ಫಂಡಿಂಗ್ ಮಾಡಿ ರಿಸರ್ಚ್ ಸಂಸ್ಥೆಗಳ ಮೂಲಕ ಬೊಜ್ಜು, ಅನಾರೋಗ್ಯ ಈ ಆಹಾರ ಪದಾರ್ಥಗಳಿಂದ ಬರುವುದಿಲ್ಲ. ಬದಲಾಗಿ ವ್ಯಾಯಾಮ ಮಾಡದೆ ಇರುವ ಕಾರಣ ಬರುತ್ತದೆ ಎಂದು ಹೇಳಿಸುತ್ತಿವೆ ಎನ್ನಲಾಗಿದೆ.
ವ್ಯಾಯಾಮ ಮಾಡಬೇಕು ನಿಜ. ಆದರೆ ಈ ಪದಾರ್ಥಗಳ ಬಳಕೆಯಿಂದಲೂ ಬೊಜ್ಜು, ಅನಾರೋಗ್ಯ ಬರುತ್ತದೆ. ಇದರ ಪರಿಣಾಮವನ್ನು ವ್ಯಾಯಾಮ ಮಾಡದೇ ಇರುವ ಕಾರಣ ಈ ಕಾಯಿಗಳು ಬರುತ್ತವೆ ಎಂದು ಹೊಣೆ ಮಾಡಲು ಸಾಧ್ಯವಿಲ್ಲ.
ಗಮನ ಸೆಳೆದ The Lancet
The Lancet ನೂತನ ವರದಿ ಅನ್ವಯ ಅತಿ ಸಂಸ್ಕರಿಸಿದ ಆಹಾರ ಪದಾರ್ಥಗಳು ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದಿದೆ. ಮತ್ತೊಮ್ಮೆ ಹೇಳುತ್ತಿದ್ದೇವೆ. ನಮ್ಮ ಈ ವರದಿ ನಿಮ್ಮನ್ನು ಭಯಪಡಿಸಲು ಅಲ್ಲ, ನಿಮ್ಮಲ್ಲಿ ಜಾಗೃತಿ ಮೂಡಿಸಲು ಮಾತ್ರ.
ನಾವು ಬಯಸುವುದು ನೀವೇನಾದ್ರೂ ಚಿಪ್ಸ್, ಬರ್ಗರ್, ಫ್ರೆಂಚ್ ಫ್ರೈಸ್ ರೀತಿಯ ಅಲ್ಟ್ರಾ ಪ್ರೋಸೆಸ್ ನಿಂದ ತಯಾರಾಗುವ ಆಹಾರಗಳಿಗಾಗಿ ಅಂಗಡಿಗಳಿಗೆ ಓಡುತ್ತಿದ್ದರೇ, ಅಂಗಡಿಗಳಿಂದ ವಾಪಸ್ ಬನ್ನಿ, ಮತ್ತೆ ಮುಂದೆ ಯಾವಾಗಾದರು ಆನ್ಲೈನ್ ಮೂಲಕ ತರಿಸಲು ಮುಂದಾದಾಗ ಈ ವರದಿಯನ್ನೊಮ್ಮೆ ಓದಿ. ಏಕೆಂದರೆ ಅಲ್ಟ್ರಾ ಪ್ರೋಸೆಸ್ ನಿಂದ ತಯಾರಾಗುವ ಪದಾರ್ಥ ತಿನ್ನುವುದರಿಂದ ನಿಮ್ಮ ಹೃದಯ ತೊಂದರೆಗೆ ಒಳಗಾಗಬಹುದು.
ಇವುಗಳನ್ನು ತಯಾರು ಮಾಡುವ ಕಂಪನಿಗಳ ಪ್ರಚಾರ ತಂತ್ರ ಎಷ್ಟು ವಿಶಾಲವಾಗಿದೆ ಎಂದರೆ, ಅವರ ಆಕರ್ಷಣೆ, ಬ್ರಾಂಡ್ ಅಂಬಾಸಿಡರ್‌ಗಳ ಮೋಡಿಯ ಮುಂದೆ, ನಮ್ಮ ಮಾತು ಯಾರು ಕೇಳುತ್ತಾರೆ ಎನಿಸುತ್ತದೆ.
ಏಕೆಂದರೆ ನವದೆಹಲಿಯಲ್ಲಿ ಗಾಳಿಯಲ್ಲಿ ತೀವ್ರ ಸ್ವರೂಪದ ವಿಷವಿದೆ. ಇದು ರಾಜಕೀಯ ಅಥವಾ ಸಾಮಾಜಿಕ ಚಿಂತನೆಯ ಮೇಲೆ ಯಾವುದಾದರೂ ಪರಿಣಾಮ ಬೀರಿದೆಯೇ..?.
ಕಳೆದ 10 ವರ್ಷಗಳಿಂದ ಈ ಒಂದು ನಗರದಲ್ಲಿ (ನವದೆಹಲಿ) ಗಾಳಿ ವಿಷಪೂರಿತವಾಗಿದೆ ಎಂದು ಗಂಭೀರ ಚರ್ಚೆ ನಡೆದಿದೆ. ಆದರೆ ಪರಿಣಾಮ ಏನು..? ಜನಜಾಗೃತಿ ಏನು..? ಇದೇ ಆತ್ಮ ವಿಶ್ವಾಸ ಅಲ್ಟ್ರಾ ಪ್ರೋಸೆಸ್ ನಿಂದ ಆಹಾರ ಪದಾರ್ಥ ತಯಾರಿಸುವ ಕಂಪನಿಗಳದ್ದಾಗಿದೆ.
ಏಕೆಂದರೆ ಫಾಸ್ಟ್ ಫುಡ್ ಬಳಕೆಯಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಎಷ್ಟೇ ವರದಿಗಳು ಬಂದರು, ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಪ್ರತಿಷ್ಠೆ ಎಂಬಂತೆ ಅತಿ ಸಂಸ್ಕರಿಸಿದ ಆಹಾರ ಪದಾರ್ಥ ತಿನ್ನಿಸುತ್ತಿದ್ದಾರೆ, ಅವರೂ ಕೂಡ ತಿನ್ನುತ್ತಲೇ ಇದ್ದಾರೆ.
Lancet ವರದಿಯಲ್ಲಿ ಹೇಳಲಾಗಿದೆ. 2024ರಲ್ಲಿ ಅಲ್ಟ್ರಾ ಪ್ರೋಸೆಸ್ ಫುಡ್ ತಯಾರಿಸುವ ಕೇವಲ ಮೂರು ಕಂಪನಿಗಳು 13.2 ಮಿಲಿಯನ್ ಡಾಲರ್ ಜಾಹಿರಾತಿಗಾಗಿ ಖರ್ಚು ಮಾಡಿವೆ. ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಇದರ ಮೌಲ್ಯ 1.25 ಲಕ್ಷ ಕೋಟಿ ಆಗುತ್ತದೆ.
ವಿಶ್ವ ಆರೋಗ್ಯ ಸಂಘಟನೆಯ ವೆಚ್ಚಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಹಣವನ್ನು ಕೇವಲ ಮೂರು ಕಂಪನಿ ಅಲ್ಟ್ರಾ ಪ್ರೋಸೆಸ್ ಫುಡ್ ಗಳ ಜಾಹೀರಾತಿಗೆ ಖರ್ಚು ಮಾಡುತ್ತಿವೆ.
ಹೇಗೆಂದರೆ ಬಿಹಾರ ಚುನಾವಣೆಗೂ ಮುನ್ನ 10 ಸಾವಿರ, ಕರ್ನಾಟಕದ ಗೃಹಲಕ್ಷ್ಮಿ ಎರಡು ಸಾವಿರದ ಮುಂದೆ ಪ್ರಜಾಪ್ರಭುತ್ವ ಆರೋಗ್ಯ ಅನಾರೋಗ್ಯಕ್ಕೆ ಸಿಲುಕಿದಂತೆ, ಫಾಸ್ಟ್ ಫುಡ್ ಕಂಪನಿಗಳು ನೀಡುತ್ತಿರುವ 1.25 ಲಕ್ಷ ಕೋಟಿ ಜಾಹಿರಾತಿನ ಮುಂದೆ ಜನರ ಆರೋಗ್ಯ ಚಿಂತನೆ ಗಾಳಿಯಲ್ಲಿ ಹಾರಿಹೋಗಿದೆ.
ಆದಾಗ್ಯೂ ವಾಸ್ತವ ಮರೆಮಾಚಲು ಸಾಧ್ಯವಿಲ್ಲ. ಆರೋಗ್ಯ ಇಲಾಖೆ ಸೂಚನೆ ನೀಡುತ್ತದೆ. ಆದರೆ ಸರ್ಕಾರಗಳು ಇವುಗಳನ್ನು ನಿಷೇಧ ಮಾಡುವುದಿಲ್ಲ. ಏಕೆಂದರೆ ಜಾಹಿರಾತಿಗೇ ಇಷ್ಟು ಖರ್ಚು ಮಾಡಿದವರ ವಿರುದ್ಧ ಸರ್ಕಾರಗಳು ಕ್ರಮಕೈಗೊಳ್ಳಲು ಸಾಧ್ಯವೆ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಫಾಸ್ಟ್ ಫುಡ್ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಕುರಿತಂತೆ ವೈಧ್ಯಕೀಯ ರಂಗದ ವಿಶ್ವವಿಖ್ಯಾತ ವೆಬ್ಸೈಟ್ The Lancet ಅಲ್ಟ್ರಾ ಪ್ರೋಸೆಸ್ ಫುಡ್ ಕುರಿತಾದ ಮೂರು ಸಂಶೋಧನಾ ವರದಿ ಪ್ರಕಟಿಸಿದೆ.
ಈ ಸಂಶೋಧನಾ ವರದಿಯನ್ನು ಪ್ರಪಂಚದ ಹಲವು ದೇಶಗಳ ವಿವಿಧ ವಿದ್ಯಾಲಯಗಳ ಅನೇಕ ವಿಜ್ಞಾನಿಗಳು, ಸಂಶೋದಕರು ಹಲವು ವರ್ಷಗಳಿಂದ ನಡೆಸಿದ ಪರಿಶೀಲನೆ ಆಧಾರ ಮೇಲೆ ಆ ಮೂರು ಸರಣಿ ವರದಿ ರಚಿಸಿದ್ದಾರೆ. ಅದರ ಲಿಂಕ್ ಇಲ್ಲಿದೆ
ಕೊನೆಯದಾಗಿ ಅಲ್ಟ್ರಾ ಪ್ರೋಸೆಸ್ ಆಹಾರ ಬಳಕೆಯಿಂದ ಅನಾರೋಗ್ಯ ಉಂಟಾಗುತ್ತದೆಯೇ ಹೊರತು, ವ್ಯಾಯಾಮ ಮಾಡದೇ ಇರುವುದರಿಂದಲ್ಲ. ವ್ಯಾಯಾಮ ಮಾಡುವುದು ಒಳ್ಳೆಯದೇ.. ಹಾಗೆಂದು ಅಲ್ಟ್ರಾ ಪ್ರೋಸೆಸ್ ಆಹಾರ ತಿಂದು ವ್ಯಾಯಾಮ ಮಾಡಿದರೆ, ಅನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಇರಬೇಡಿ.
ಏಕೆಂದರೆ ಉದಾಹರಣೆಗೆ ಓರ್ವ ವ್ಯಕ್ತಿ ಸಿಗರೇಟ್ ಸೇವನ ಮಾಡಿ ( ಧೂಮಪಾನ ಆರೋಗ್ಯಕ್ಕೆ ಒಳ್ಳೆಯದ್ದಲ್ಲ) ಶ್ವಾಸಕೋಶದ ಆರೋಗ್ಯಕ್ಕಾಗಿ ಪ್ರತಿ ದಿನ ಹಲವು ಕಿಲೋಮೀಟರ್ ಓಡಿದರೆ ಸಾಧ್ಯವೇ..? ಶ್ವಾಸಕೋಶದ ಆರೋಗ್ಯ ಬೇಕಾದರೆ ಕೂಡಲೇ ಸಿಗರೆಟ್ ಸೇವನೆ ನಿಲ್ಲಿಸಬೇಕು. ಸಿಗರೇಟ್ ಸೇವನೆ ಮಾಡಿ ಓಡಿದರೆ ಶ್ವಾಸಕೋಶದ ರಕ್ಷಣೆ ಸಾಧ್ಯವಿಲ್ಲ ಅಲ್ಲವೇ..?
ಅಂತೆಯೇ ಅಲ್ಟ್ರಾ ಪ್ರೋಸೆಸ್ ಆಹಾರದಿಂದ ರಕ್ಷಣೆ ಅವುಗಳನ್ನು ತಿನ್ನುವುದ ನಿಲ್ಲಿಸುವುದರಿಂದಲೇ ಹೊರತು, ವ್ಯಾಯಾಮ ಮಾಡುತ್ತಿಲ್ಲ ಎಂಬುದು ಸಕಾರಣವಲ್ಲ.
ನಂಬಿಕೆಯಿದೆ ಈ ವರದಿಯನ್ನು ತಾವುಗಳು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು. ಏಕೆಂದರೆ ನಮ್ಮ ಆರೋಗ್ಯದ ಕುರಿತು ಕಂಪನಿಗಳ ಜೊತೆ ಒಪ್ಪಂದಗಳನ್ನು ಸರ್ಕಾರ, ಬ್ರಾಂಡ್ ಅಂಬಾಸಿಡರ್‌ಗಳು, ಚಿತ್ರ ನಟರು ಮಾಡಿಕೊಳ್ಳುತ್ತಿದ್ದಾರೆ.. ನಾವು ಹೇಗೆ ಮಾಡಲು ಸಾಧ್ಯ ಅಲ್ಲವೆ..?
ಅರ್ಜೆಂಟ್ ಏನಿಲ್ಲ. ಏಕೆಂದರೆ ಈ ರೀತಿಯ ಒಳ್ಳೆಯ ವಿಷಯ ಒಂದೇ ದಿನಕ್ಕೆ ಅರ್ಥ ಆಗೋದಿಲ್ಲ.. ಸ್ವಲ್ಪ ನಿಧಾನವಾಗಿ, ತಾಳ್ಮೆಯಿಂದ ಯೋಚಿಸಿ, ನಮ್ಮ ಆರೋಗ್ಯ, ನಮ್ಮ ಹೊಣೆ ಎಂಬಂತೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ವಿಡಿಯೋ ವ್ಯಾಪಕ ವೈರಲ್ ಆಗಿದೆ.