Nitish Kumar in Bihar, H.D. Kumaraswamy in Karnataka to give a retaliatory blow to Congress; Harish Gowda

ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಹಾರದಲ್ಲಿ ನಿತೀಶ್ ಕುಮಾರ್, ಕರ್ನಾಟಕದಲ್ಲಿ ಹೆಚ್.ಡಿ. ಕುಮಾರಸ್ವಾಮಿ; ಹರೀಶ್ ಗೌಡ

ಬೆಂಗಳೂರು: ಬಿಹಾರದಲ್ಲಿ ನಿತೀಶ್ ಕುಮಾರ್ (Nithish Kumar) ಅವರು ಅಧಿಕಾರಕ್ಕೆ ಬಂದಂತೆ, ಕರ್ನಾಟಕದಲ್ಲಿ ನಡೆಯಲಿರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ದೊಡ್ಡಬಳ್ಳಾಪುರ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರದಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಗಳು ನಡೆಯುವ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಬೆಳವಣಿಗೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.

ರಾಜಕೀಯದಲ್ಲಿ ಯಾರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹೇಳಲಿಕ್ಕೆ ಆಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿ ಆಗಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ನಡೆಯಲಿವೆ ಎಂದು ಹರೀಶ್ ಗೌಡ ಹೇಳಿದರು.

ದಿನಕ್ಕೊಂದು ಬೆಳವಣಿಗೆ: ಹೆಚ್.ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್.ಡಿ.‌ಕುಮಾರಸ್ವಾಮಿ ಮಾತನಾಡಿ, ಪರೋಕ್ಷವಾಗಿ ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಬೊಟ್ಟು ಮಾಡಿದ ಅವರು; ದಿನಕ್ಕೊಂದು, ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ನೋಡಿದರೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯೇ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರು ಜನರ ಜತೆಯೇ ಇರಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೇಂದ್ರ ಸಚಿವರು ಕರೆ ನೀಡಿದರು.

ಜನ ಕೆಟ್ಟ ಆಡಳಿತದಿಂದ ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆ ಸುಳಿಗೆಯಿಂದ ಬೇಸತ್ತು ಹೋಗಿದ್ದಾರೆ. ಮುಂದೆ ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಐದು ವರ್ಷದಲ್ಲಿ‌ ಯಾವ ರೀತಿ ಆಡಳಿತ ಕೊಡಬೇಕು, ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ. ಒಂದು ವೇಳೆ ಜನ ಮೆಚ್ಚುವ ಸರ್ಕಾರ ನನ್ನಿಂದ ಕೊಡಲು ಆಗದಿದ್ದರೆ ಈ ಜನ್ಮದಲ್ಲಿ ಮತ್ತೆ ನನ್ನ ಮುಖ ತೋರಿಸಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯದ ಸಾಲ 7.50 ಲಕ್ಷ ಕೋಟಿ ದಾಟಿದೆ. ಸಿದ್ಧರಾಮಯ್ಯ ಒಬ್ಬರೇ 5ರಿಂದ 5.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಏನಕ್ಕೆ ಮಾಡಿದ್ರು ಇಷ್ಟು ಸಾಲವನ್ನು? ಯಾವ ಪುರುಷಾರ್ಥಕ್ಕೆ ಮಾಡಿದ್ರು ಎಂಬುದನ್ನು ಜನರಿಗೆ ಉತ್ತರ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.

ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ದೇವೇಗೌಡರನ್ನು ವಂಚಿಸಿದರು

ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮ ಇಡೀ ಬದುಕನ್ನು ಜನರಿಗೆ ಮೀಸಲಿಟ್ಟರು. ಅವರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋದವರಲ್ಲಾ. ಈ ರಾಜ್ಯವನ್ನು ದೀರ್ಘ ಕಾಲ ಆಳಿದ ದೇವರಾಜು ಅರಸು ಅವರೇ ಕುಂಡೆ ಬಂದು ನನ್ನ ನಮ್ಮ ಜೊತೆ ಕೈ ಜೋಡಿಸು ಎಂದು ಹೇಳಿದರು ದೇವೇಗೌಡರು ಕೇಳಲಿಲ್ಲ. ಒಂದು ಆದರ್ಶ, ಮೌಲ್ಯ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅಂತಹವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದರು.

ದೇವೇಗೌಡರು ಜ್ಯೋತಿಷ್ಯರನ್ನ ನಂಬುತ್ತಾರೆ ಎಂದು ಆ ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ವಂಚಿಸಿದರು. ಅಲ್ಲದೆ, ಮೈಸೂರಿನಲ್ಲಿ ದೇವೇಗೌಡರು 500 ನಿವೇಶನಗಳನ್ನು ಖರೀದಿ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರ ವಿರುದ್ದ ಸಿಐಡಿ, ಲೋಕಾಯುಕ್ತ ಸೇರಿ ಅನೇಕ ತನಿಖೆಗಳನ್ನು ನಡೆಸಿದರು. ಕೊನೆಗೆ ಸತ್ಯಕ್ಕೆ ಜಯವಾಯಿತು. ದೇವೇಗೌಡರು ಏನೆಂಬುದು ರಾಜ್ಯದ ಜನತೆಗೆ ತಿಳಿಯಿತು ಎಂದು ಅವರು ಹೇಳಿದರು.

ಜನರು ಹಾಗೂ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ. ಜನತೆಗೆ ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಿದ್ದೇವೆ. ನಾವೇನು ಅನ್ಯಾಯ ಮಾಡಿದ್ದೇವೆ ಈ ರಾಜ್ಯಕ್ಕೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ? ನಮಗೆ ಯಾಕೆ ಪೂರ್ಣ ಪ್ರಮಾಣದ ಆಶೀರ್ವಾದ ಸಿಕ್ಕಿಲ್ಲ? ಯಾವ ಸಮುದಾಯಕ್ಕೂ ನಮ್ಮ ಪಕ್ಷದಿಂದ ಅನ್ಯಾಯ ಆಗಿಲ್ಲ. ಬೇರೆ ಬೇರೆ ರಾಜ್ಯಗಳ ಜನರು ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಜನತೆಗೆ ಏಕೆ ಅಂತಹ ಭಾವನೆ ಇಲ್ಲ ಎಂದು ಸಚಿವರು ಅತೀವ ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ದರೋಡೆ ಮಾಡ್ತಿದೆ

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇನ್ನು ಎಷ್ಟು ದರೋಡೆ ಮಾಡುತ್ತೀರಿ? ಎಷ್ಟೊಂದು ತೆರಿಗೆಗಳನ್ನು ಏರಿಸಿದಿರಿ? ಎಷ್ಟೊಂದು ಬೆಳೆಗಳನ್ನು ಹೆಚ್ಚಳ ಮಾಡಿದಿರಿ? ಬಿ ಖಾತಾ ಏ ಖಾತಾ ತೆರಿಗೆ ಎಂದು ದೋಖಾ ಮಾಡುತ್ತಿದೀರಿ. ಬೆಂಗಳೂರಿನಲ್ಲಿ, ರಾಜ್ಯದಲ್ಲಿ ರಸ್ತೆ ಗುಂಡಿಗೆ ಬಿದ್ದು ಎಷ್ಟೋ ಜನ ಸಾವನಪ್ಪಿದ್ದಾರೆ. ಕಬ್ಬು ಬೆಳೆಗಾರರ ಕಬ್ಬಿಗೆ ಬೆಂಕಿ ಹಾಕಿದ್ದು ಯಾರು ಅಂತಾ ಗೊತ್ತಿಲ್ಲಾ. ಈ ಪಾಪ ಸುಮ್ಮನೆ ಹೋಗಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಎರಡು ಬಾರಿ ಸಿಎಂ ಆಗಿದ್ದರೂ ಸಂಪೂರ್ಣ ಬಹುಮತದ ಸರ್ಕಾರ ಸಿಗಲಿಲ್ಲ. ಬಿಜೆಪಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದೆ. 20 ತಿಂಗಳ ಅಧಿಕಾರವದಿಯಲ್ಲಿ ನೂರಾರು ಕಾಲೇಜು, ಆಸ್ಪತ್ರೆ ಕಟ್ಟಿದ್ದೇವೆ. ಲಾಟರಿ, ಸಾರಾಯಿ ನಿಷೇಧ ಮಾಡಿದಾಗ ಯಾವ ರೀತಿ ನನ್ನ ಮೇಲೆ ಎಷ್ಟೇ ಒತ್ತಡ ಹಾಕಿದರೂ ರಾಜ್ಯದ ಹೆಣ್ಣು ಮಕ್ಕಳಲ್ ಒಳ್ಳೆಯದಕಾಗಿ ನಾನು ಅವುಗಳನ್ನು ಬ್ಯಾನ್ ಮಾಡಿದೆ. ಆ ಕಾರಣಕ್ಕೆ ಜನರು ನನಗೆ ಶಿಕ್ಷೆ ವಿಧಿಸುತ್ತಿದ್ದಾರೆಯೇ? ಎಂದು ನೋವು ವ್ಯಕ್ತಪಡಿಸಿದರು ಕೇಂದ್ರ ಸಚಿವರು.

25ರಿಂದ 26 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 500 ರಿಂದ 1000 ಕೋಟಿ ಅನುದಾನ ಕೊಟ್ಟೆ. ಇಷ್ಟಾದರೂ ನಮಗೆ ಜನರು ಪೂರ್ಣ ಬಹುಮತ ನೀಡುತ್ತಿಲ್ಲ ಯಾಕೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಾತಿ ಗಣತಿ ಹೆಸರಿನಲ್ಲಿ ಜನರ ವಿಭಜನೆ

ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಮಾಡಲು ಇವರಿಗೆ ಆಗುತ್ತಿಲ್ಲ. ಅದರಿಂದಲೇ ವಾಮಮಾರ್ಗಗಳ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿವೆ ಎಲ್ಲಿವೆ ಕಾಂತರಾಜು , ಜಯಪ್ರಕಾಶ್ ಹೆಗಡೆ, ಮದುಸೂದನ್ ನಾಯ್ಕ್ ವರದಿಗಳು? ಸ್ವಲ್ಪ ಹೇಳುತ್ತೀರಾ ಮುಖ್ಯಮಂತ್ರಿಗಳೇ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ಸಿದ್ದರಾಮಯ್ಯ ಅವರು 25- 30 ವರ್ಷದಿಂದಲೂ ಅಧಿಕಾರದಲ್ಲಿಯೇ ಇದ್ದಾರೆ. ಈ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ? ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಏನು ಸಾಧನೆ ಮಾಡಿದ್ದೀರಿ? ಬೆಂಗಳೂರು ನಗರವನ್ನು ಹೋಳು ಮಾಡಿ ಗ್ರೇಟರ್ ಬೆಂಗಳೂರು ಅಂತ ಮಾಡಿ ಐವರು ಮೇಯರ್ ಗಳನ್ನ ಮಾಡಿ ಏನ್ ಮಾಡ್ತಿರಪ್ಪ ನೀವು? ಎಂದು ಅವರು ಟೀಕಾಪ್ರಹಾರ ನಡೆಸಿದರು.

ರಾಜ್ಯದ ಜನರ ಋಣ ತೀರಿಸುವೆ

ಕೇಂದ್ರದಲ್ಲಿ ನರೇಂದ್ರ ಮೋದಿಯವರು ನನಗೆ ಅವಕಾಶ ಕೊಟ್ಟಿದ್ದಾರೆ. ಆಂದ್ರಪ್ರದೇಶದ ವೈಜಾಕ್ ನಲ್ಲಿ ಸ್ಟೀಲ್ ಫ್ಯಾಕ್ಟರಿ ಪುನರಾರಂಭ ಮಾಡಿದ್ದೇನೆ. ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಸ್ಟೀಲ್ ಫ್ಯಾಕ್ಟರಿಯನ್ನ ಪುನಶ್ಚೇತನ ಮಾಡುವೆ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ನಾವು ಎನ್ಡಿಎ ಮೈತ್ರಿ ಕಡಿದುಕೊಳ್ಳುವುದಿಲ್ಲ; ಹೆಚ್.ಡಿ. ದೇವೇಗೌಡರು

ಯಾವುದೇ ಕಾರಣಕ್ಕೂ ನಾವು ಎನ್ಡಿಎ ಮೈತ್ರಿ ಕಡಿದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ವಿಶ್ವಾಸ ಇರಿಸಿದ್ದೇವೆ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಹೇಳಿದರು.

ಜೆಡಿಎಸ್ ಬೆಳ್ಳಿಹಬ್ಬವನ್ನು ಉದ್ಘಾಟಿಸಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡಿದ ಮಾಜಿ ಪ್ರಧಾನಿಗಳು; ನಾವು ಎನ್ಡಿಎ ಜತೆ ಇದ್ದೇವೆ. ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ಇದನ್ನು ನಮ್ಮ ಕಾರ್ಯಕರ್ತರು, ಮುಖಂಡರು ಯಾರು ಮರೆಯಬಾರದು ಎಂದರು.

ತುರ್ತು ಪರಿಸ್ಥಿತಿ ಹೇರಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಿದ ಜಯಪ್ರಕಾಶ ನಾರಾಯಣ ಅವರ ಜತೆಯಲ್ಲಿ ನಾವು, ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ಗುಡುಗಿದರು.

ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ

ಜೆಡಿಎಸ್ ಪಕ್ಷದಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿ ಹೇಳಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು; ಅವರನ್ನು ನಾನು ಸಿಎಂ ಮಾಡಲು ತಯಾರಿದ್ದೆ. ಆದರೆ ಸೋನಿಯಾ ಗಾಂಧಿ ಅವರು ಧರ್ಮಸಿಂಗ್ ಅವರನ್ನು ಸಿಎಂ ಮಾಡಲು ಪಟ್ಟು ಹಿಡಿದರು. ಕಾಶ್ಮೀರದಲ್ಲಿ ಗುಲಾಮ್ ನಬಿ ಆಜಾದ್ ಅವರನ್ನು ಡಿಸಿಎಂ ಮಾಡಿದ್ದೀರಿ, ಮುಫ್ತಿ ಮೊಹಮ್ಮದ್ ಸಯ್ಯಿದ್ ಅವರನ್ನು ಸಿಎಂ ಮಾಡಿದ್ದೀರಿ. ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಎಂದು ಮೂರು ಬಾರಿ ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿ ಕೇಳಿದೆ. ಸಿದ್ಧರಾಮಯ್ಯ ಬೇಕಿದ್ದರೆ ಸೋನಿಯಾ ಗಾಂಧಿ ಅವರನ್ನು ಕೇಳಲಿ, ಅವರು ಇನ್ನೂ ಬದುಕಿದ್ದಾರೆ ಎಂದು ಹೇಳಿದರು.

ಸಿದ್ಧರಾಮಯ್ಯ ನೀವು ಸತ್ಯ ಹೇಳಲಿಲ್ಲ, ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾತನಾಡುತ್ತೀರಿ. ಆದರೆ ಸೋನಿಯಾ ಗಾಂಧಿ ಇದ್ದಾರೆ, ಅವರಿಗೆ ಸತ್ಯ ಗೊತ್ತಿದೆ. ಅಹಮದ್ ಪಟೇಲ್ ಅವರಿಗೆ ತಿಳಿದಿತ್ತು. ಸಿದ್ಧರಾಮಯ್ಯ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಸುತಾರಾಂ ಒಪ್ಪಲಿಲ್ಲ. ನೀವು ನಮ್ಮ ಸಿಎಂ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ನಾವು ಚುನಾವಣೆಗೆ ಹೋಗುತ್ತೇವೆ ಎಂದರು. ನಾವು ವಿಧಿ ಇಲ್ಲದೆ ಒಪ್ಪಿಕೊಂಡೆವು ಎಂದು ದೇವೇಗೌಡರು ಹಳೆಯ ವಿಷಯವನ್ನು ಮೆಲುಕು ಹಾಕಿದರು.

ಆ ಚುನಾವಣೆಯಲ್ಲಿ ಜೆಡಿಎಸ್ 58 ಸೀಟು ಗೆಲ್ಲೋಕೆ ಚನ್ನಪ್ಪ ಎನ್ನುವ ಲ್ಯಾವಾದೇವಿದಾರರೊಬ್ಬರ ಮನೆಗೆ ರಾತ್ರಿ ಹನ್ನೆರಡು ಹೊತ್ತಿನಲ್ಲಿ ಹೋಗಿ ಎರಡು ಚೆಕ್ ಕೊಟ್ಟು ಎರಡು ಕೋಟಿ ಸಾಲ ತಂದೆ. ಆಗ ಈ ಸಿದ್ಧರಾಮಯ್ಯ ಏನು ಮಾಡುತ್ತಿದ್ದರು. ಮಾತಾಡುವಾಗ ಕನಿಷ್ಠ ಪ್ರಮಾಣದ ಕ್ರಿಯೆ ಇರಬೇಕು, ಪ್ರಾಮಾಣಿಕತೆ ಇರಬೇಕು. ಸುಳ್ಳು ಹೇಳಬಾರದು ಎಂದು ದೇವೇಗೌಡರು ಕಿಡಿಕಾರಿದರು.

ರಾಮಕೃಷ್ಣ ಹೆಗಡೆ ಅವರು ಎಂಟು ವರ್ಷ ಸಿಎಂ ಆಗಿದ್ದರು. ಅವರು ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದಾರಾ? ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ಈ ದೇವೇಗೌಡ. ಹೆಗಡೆ ಅಗಲಿ ಬೊಮ್ಮಾಯಿ ಆಗಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಲಿಲ್ಲ. ನೀವೇನೂ ಮಹಾ ಮೇಧಾವಿ ಆಗಿದ್ದೀರಾ? ನೀವು ಆಕ್ಸ್ಫರ್ಡ್ ವಿವಿಯಲ್ಲಿ ಹಣಕಾಸು ಪದವಿ ಪಡೆದಿದ್ರಾ? ನೀವು ಸುಪ್ರೀಂ ಕೋರ್ಟ್ ಲಾಯರ್ ಏನೂ ಅಲ್ಲ, ಹೈಕೋರ್ಟ್ ನಲ್ಲಿಯೂ ಲಾಯರ್ ಅಲ್ಲ. ಮೈಸೂರಿನಲ್ಲಿ ಎಲ್ಲೋ ಒಂದೆರಡು ಕೇಸು ವಾದ ಮಾಡಿಕೊಂಡು ಇದ್ದವರು. ನಾನು ಬದುಕಿದ್ದೇನೆ, ಸೋನಿಯಾ ಗಾಂಧಿ ಕೂಡ ಬದುಕಿದ್ದಾರೆ. ಸುಳ್ಳು ಹೇಳಬೇಡಿ. ಜೆಡಿಎಸ್ ಪಕ್ಷಕ್ಕೆ ನಿಮ್ಮ ದೇಣಿಗೆ ಹೇಳಿ? ಎಂದು ದೇವೇಗೌಡರು ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದರು.

ಹೆಗಡೆ ನಿಮ್ಮನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಮೇಲೆ ಇನ್ನೊಮ್ಮೆ ಯಾವುದೋ ಪಶು ಸಂಗೋಪನೆ ಅಥವ ಇನ್ನೂ ಯಾವುದೋ ಖಾತೆ ನಿರ್ವಹಿಸಿದಿರಿ. ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಸರಕಾರಿ ನೌಕರರ ಸಂಬಳ ಕೊಡೋಕೆ ದುಡ್ಡು ಇಲ್ಲ ಎಂದು ಪಿಯರ್ ಲೆಸ್ ಕಂಪನಿಯಿಂದ 200 ಕೋಟಿ ಸಾಲ ತಂದರು. ಅದಾದ ಮೇಲೆ ಬಂದ ಸರ್ಕಾರದಲ್ಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಿದೆ. ಆ ಸಾಲ ತಂದ ಸಂದರ್ಭದಲ್ಲಿ ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿತ್ತು. ನಿಮಗೆ ಗೊತ್ತಿಲ್ಲವೇ? ರಾಜ್ಯದ ಹಣಕಾಸು ಸ್ಥಿತಿ ಸರಿ ಮಾಡಲೇಬೇಕು ಎಂದು ನಾನು ನಿರ್ಧಾರ ಕೈಗೊಂಡು ಈ ವ್ಯಕ್ತಿಯನ್ನು ಹಣಕಾಸು ಮಂತ್ರಿಯನ್ನಾಗಿ ಮಾಡಿದೆ. ಅದೇ ನಾನು ಮಾಡಿದ ತಪ್ಪು ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಅನೇಕ ಸಂದರ್ಭಗಳಲ್ಲಿ ನಾನು ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕಣ್ಣಿರು ಇಟ್ಟೆ. ಅವರನ್ನು ಹಣಕಾಸು ಮಂತ್ರಿ ಮಾಡಿದ್ದು ಹೆಗಡೆ ಅಲ್ಲ, ನಾನು. ಅದನ್ನು ಆ ಮನುಷ್ಯ ನೆನಪು ಇಟ್ಟುಕೊಳ್ಳಬೇಕು ಎಂದು ಗುಡುಗಿದ ಗೌಡರು; ಸಿದ್ಧರಾಮಯ್ಯ ನಮ್ಮ ಪಕ್ಷಕ್ಕೆ ಏನು ಕೊಡುಗೆ ನೀಡಿಲ್ಲ. ನಾನು ಆ ವ್ಯಕ್ತಿಯನ್ನು ಪಕ್ಷದ ರಾಜ್ಯದ ಅಧ್ಯಕ್ಷ ಮಾಡಬೇಕು ಎಂದು ಹೊರಟಾಗ ಹೆಗಡೆ ಅವರು ತಮ್ಮ ಕೋಣೆಯಲ್ಲಿ ನನ್ನ ಕೈ ಹಿಡಿದು ಯಾರನ್ನಾದರೂ ಮಾಡು, ಈ ಆತನನ್ನು ಮಾತ್ರ ಮಾಡಬೇಡ ಎಂದು ಹೇಳಿದರು. ನಾನು ಹೆಗಡೆ ಅವರ ಮಾತು ಕೇಳಲಿಲ್ಲ ಎಂದು ಅವರು ವಿವರವಾಗಿ ಹೇಳಿದರು.

ನಾನು ಜಾಲಪ್ಪ ಅವರಿಂದ ನಾನು ರಾಜಕಿಯವಾಗಿ ಬೆಳೆದ ಅಂತಾರೆ. ಆ ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಇರಲಿ ಎಂದು ನಾನು ಮಂಜೂರು ಮಾಡಿದೆ. ದೇವರಾಜು ಅರಸು ಹೆಸರಿನಲ್ಲಿ ಸ್ಥಾಪನೆ ಆಗಲಿ ಎಂದು ಕೊಟ್ಟೆ. ಇವತ್ತು ಅದು ಜಾಲಪ್ಪ ಮೆಡಿಕಲ್ ಕಾಲೇಜು ಆಗಿದೆ. ಅವರ ಕುಟುಂಬದ ಆಸ್ತಿಯಾಗಿದೆ. ಸಮುದಾಯದ ಆಸ್ತಿ ಆಗಬೇಕಿದ್ದ ಮೆಡಿಕಲ್ ಕಾಲೇಜು ಅವರ ಕುಟುಂಬದ ಆಸ್ತಿಯಾಗಿ ಬದಲಾಗಿದೆ. ಇದು ಇವರ ಸಾಮಾಜಿಕ ನ್ಯಾಯ! ಎಂದು ದೇವೇಗೌಡರು ಲೇವಡಿ ಮಾಡಿದರು.

ಅಹಿಂದ ಸಮಾವೇಶ ಮಾಡಲು ಹೊರಟಾಗ ಅದನ್ನು ಪಕ್ಷದ ವೇದಿಕೆಯಲ್ಲಿ ಮಾಡಿ ಎಂದು ಸೂಚಿಸಿದೆ. ಅದನ್ನು ಅವರು ಕೇಳಲಿಲ್ಲ. ಪ್ರತ್ಯೇಕವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡುವುದಾಗಿ ಹೊರಟರು. ಕೊನೆಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ನಾನು ಅವರನ್ನು ಪಕ್ಷದಿಂದ ಹೊರ ಹಾಕಲು ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ಬಂದಿದ್ದಾರೆ, ಹೋಗಿದ್ದಾರೆ. ಹೆದರುವುದಿಲ್ಲ. ನಾನು ಪಕ್ಷ ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದರು ಅವರು.

ನಿತೀಶ್ ಅವರು ಮೂವತ್ತು ವರ್ಷದಿಂದಲೂ ರಾಜಕಾರಣದಲ್ಲಿ ಇದ್ದಾರೆ. ಹತ್ತನೇ ಬಾರಿಗೆ ಪ್ರಮಾಣ ಮಾಡಿದ್ದಾರೆ. ಅವರು ಬಹಳ ಸೂಕ್ಷ್ಮವಾಗಿ ರಾಜಕಾರಣ ಮಾಡಿಕೊಂಡಿದ್ದಾರೆ. ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷಕ್ಕೆ ರಜತ ಸಂಭ್ರಮ ಬೆಳ್ಳಿನಾಣ್ಯ ಲೋಕಾರ್ಪಣೆ; ವಾಟ್ಸಪ್ ಲೈನ್ ನಂಬರ್ ಲೋಕಾರ್ಪಣೆ

ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಬೆಳ್ಳಿನಾಣ್ಯ ವಾಟ್ಸಪ್ ಲೈನ್ ನಂಬರ್ ಅನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಲೋಕಾರ್ಪಣೆ ಮಾಡಿದರು.

ರಾಷ್ಟ್ರೀಯ ಮಂಡಳಿ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ನಂತರ ಶನಿವಾರ ನಡೆದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಹೆಚ್.ಡಿ. ದೇವೇಗೌಡರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ನಾಯಕರು, ಜಿಲ್ಲಾಧ್ಯಕ್ಷರು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ರಜತ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ ಪಕ್ಷದ ಚಿನ್ಹೆ ತೆನೆಹೊತ್ತ ರೈತ ಮಹಿಳೆ, ಹೆಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಚಿತ್ರಗಳು ಇರುವ ಬೆಳ್ಳಿ ನಾಣ್ಯವನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಮಾಜಿ ಪ್ರಧಾನಿಗಳು ವಾಟ್ಸಪ್ ಲೈನ್ ನಂಬರ್ 9964002028 ಬಿಡುಗಡೆ ಮಾಡಿದರು.

ಎರಡು ನಿರ್ಣಯಗಳ ಅಂಗೀಕಾರ

ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ರೈತರ ಪರವಾಗಿ ಹಾಗೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿರುವ ಸಾವರ್ಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು. ನೆರೆಯಿಂದ ಆಸ್ತಿ, ಬೆಳೆ ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ಕೊಡಬೇಕು. ರೈತ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಖರೀದಿ ಮಾಡಬೇಕು ಎಂಬ ನಿರ್ಣಯವನ್ನು ಅಂಗಿಕರಿಸಲಾಯಿತು.

ಜತೆಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠವಾಗಿ ತಳಮಟ್ಟದಿಂದ ಕಟ್ಟುವ ಬಗ್ಗೆ ಕೂಡ ನಿರ್ಣಯ ಕೈಗೊಳ್ಳಲಾಯಿತು.

ಈ ಸಂಭ್ರಮಾಚರಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ರವರು, ಕೋರ್ ಕಮೀಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಹ್ವಾನಿತರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು ಪಾಲ್ಗೊಂಡಿದ್ದರು.

ರಾಜಕೀಯ

ರೈತನಿಗೆ ಜಾತಿ ನಿಂದನೆ ಆರೋಪ; ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಫ್‌ಐಆರ್

ರೈತನಿಗೆ ಜಾತಿ ನಿಂದನೆ ಆರೋಪ; ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಫ್‌ಐಆರ್

ಕೆರೆಯ ಮಣ್ಣು ಸಾಗಾಟ ಸಂಬಂಧ ರೈತರೊಬ್ಬರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ (BJP MLA ) ಬಿ.ಪಿ.ಹರೀಶ್ (B.P. Harish) ವಿರುದ್ಧ ದಾವಣಗೆರೆಯ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ

[ccc_my_favorite_select_button post_id="118506"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!