ಆನೇಕಲ್: ಕುಡುಕ ತಮ್ಮನ ಕಾಟ ಸಹಿಸದ ಒಡ ಹುಟ್ಟಿದ ಅಣ್ಣನೇ ಕೊಲೆ ಮಾಡಿ (Murdered) ರಸ್ತೆ ಬದಿಯ ಪೊದೆಗೆ ಎಸೆದಿರುವ ಘಟನೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲೀಪುರದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ್ (24 ವರ್ಷ ) ಅಣ್ಣನಿಂದಲೇ ಕೊಲೆಯಾದವನು. ಅಣ್ಣ ಶಿವರಾಜ್ (28 ವರ್ಷ) ಮತ್ತು ಆತನ ಗೆಳೆಯರಾದ ಸಂದೀಪ್ (24 ವರ್ಷ), ಪ್ರಶಾಂತ್ (26ವರ್ಷ) ಬಂಧಿತರು.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, ಕೊಲೆ ಯಾದ ಧನರಾಜ್ ಕಲಬುರಗಿಯಲ್ಲಿ ತಂದೆ ತಾಯಿಯ ಜತೆಗೆ ವಾಸವಾಗಿದ್ದನು. ಕುಡಿತದ ಚಟಕ್ಕೆ ಬಿದ್ದ ತಮ್ಮ ಕುಡಿದು ಬಂದು ಗಲಾಟೆ ಮಾಡುವುದು, ಕುರಿ ಕೋಳಿಗಳ ಕಳ್ಳತನ ಮಾಡುವುದು ಕಸುಬಾಗಿಸಿಕೊಂಡಿದ್ದ. ಇವೆಲ್ಲಾ ಬಿಟ್ಟು ದುಡಿದು ತಿನ್ನು ಎಂದು ಬುದ್ದಿವಾದ ಹೇಳಿದ ಅಣ್ಣನ ಮೇಲೂ ಹಲ್ಲೆ ಮಾಡುತ್ತಿದ್ದನಂತೆ.
ಈ ನಡುವೆ ನೆರೆ ಹೊರೆಯ ಜನರು ಮನೆ ಬಳಿ ಬಂದು ಧನರಾಜ ಕಳ್ಳತನ ಮಾಡಿದ್ದಾನೆ ಎಂದು ದಿನಾಲೂ ಗಲಾಟೆ ಮಾಡುತ್ತಿದ್ದರು.
ತಮ್ಮನ್ನಿಂದಾಗುವ ಉಪಟಳ ಕಾಟ ಅವಮಾನ ತಾಳಲಾರದೆ ಅಣ್ಣ ಶಿವರಾಜ್ ಸ್ನೇಹಿತರ ಜತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದನು. ನ.2 ರಂದು ತಮ್ಮನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕಲಬುರಗಿಯಿಂದ ಕರೆಸಿಕೊಂಡು ಬನ್ನೇರುಘಟ್ಟ ನೈಸ್ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ಕೂರಿಸಿಕೊಂಡರು. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ ಧನರಾಜ್ ಕೈಗಳನ್ನು ಸಂದೀಪ್ ಮತ್ತು ಪ್ರಶಾಂತ್ ಹಿಡಿದುಕೊಂಡಾಗ ಮೊದಲೇ ತಂದಿದ್ದ ಮಚ್ಚಿನಿಂದ ಶಿವರಾಜ್ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವವನ್ನು ಬನ್ನೇರುಘಟ್ಟ- ಕಗ್ಗಲೀಪುರ ರಸ್ತೆಯಲ್ಲಿ ಎಸೆದು ಹೋಗಿದ್ದರು. ನ. 6 ರಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿ ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದ ಪೋಲಿಸರಿಗೆ ಸಮೀಪದ ಖಾಸಗಿ ಕಂಪನಿಯ ಸಿಸಿಟಿವಿ ಪರಿಶೀಲಿಸಿದಾಗ ಕಾರಿನಲ್ಲಿ ಶವ ಎಸೆದು ಹೋಗಿರುವ ದೃಶ್ಯ ಸಿಕ್ಕಿತ್ತು. ಕಾರಿನ ನಂಬರ್ ಪ್ಲೇಟ್ ಆಧಾರದ ಮೇಲೆ ಮೂವರು ಆರೋಪಿಗಳನ್ನು ಕರೆ ತಂದು ವಿಚಾರಣೆಗೊಳಪಡಿಸಿಡಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಜರ್ಮನಿಯಿಂದ ಬಂದ ಯುವಕ ಪ್ಲೆಕ್ಸ್ ಬಿದ್ದು ಸಾವು
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುವಾಗ ಪ್ಲೆಕ್ಸ್ ತಗುಲಿ ರಸ್ತೆಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನೆಲ ಮಂಗಲ ನಗರದ ಬೆಸ್ಕಾಂ ಕಚೇರಿಯ ಮುಂದೆ ನಡೆದಿದೆ.
ಮೃತನನ್ನು 27 ವರ್ಷದ ತೇಜಸ್ ಗೌಡ ಮೃತ ಯುವಕ ಎಂದು ಗುರುತಿಸಲಾಗಿದೆ.
ಜರ್ಮನಿ ಯಲ್ಲಿ ಎಂಎಸ್ ಮಾಡುತ್ತಿದ್ದ ತೇಜಸ್‌ಗೌಡ ಸ್ನೇಹಿ ತನ ಮದುವೆಗಾಗಿ ಊರಿಗೆ ಬಂದಿದ್ದ. ರಸ್ತೆಯಲ್ಲಿ ಕಟ್ಟಿದ್ದ ಪ್ಲೆಕ್ಸ್ ಬಿದ್ದು ತೇಜಸ್ ಗಂಭೀರವಾಗಿ ಗಾಯ ಗೊಂಡಿದ್ದ, 3 ದಿನ ಸಾವು ಬದುಕಿನ ನಡುವೆ ಯುವಕ ಜೀವನ್ಮರಣ ಹೋರಾಟ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ತೇಜಸ್ ಗೌಡ ಸಾವನ್ನಪ್ಪಿದ್ದಾನೆ.
ನೆಲಮಂಗಲ ನಗರ ಸಭೆಯ ನಿರ್ಲಕ್ಷ್ಯಕ್ಕೆ ಕ್ಷ್ಯಕ್ಕೆ ಯುವಕ ಬಲಿಯಾಗಿದ್ದು, ಜನರು ಆಕ್ರೋಶ ಹೊರ ಹಾಕಿದ್ದಾರೆ.