ಶಿವಮೊಗ್ಗ: ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಮಾಡುವ ಬಗ್ಗೆ ಕೇಂದ್ರದ ಶಿಕ್ಷಣ ಸಚಿವರ ಜತೆ ಚರ್ಚೆ ನಡೆಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಭರವಸೆ ನೀಡಿದರು.
ಶಿವಮೊಗ್ಗದಲ್ಲಿ ಶ್ರೀ ಭಗವದ್ಗೀತೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವರು; ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಬೇಕು. ಈ ಬಗ್ಗೆ ತಾವು ಕೇಂದ್ರದಲ್ಲಿ ಸಂಬಂಧಪಟ್ಟವರ ಜತೆ ಚರ್ಚೆ ಮಾಡುವ ಎಂದು ಮನವಿ ಮಾಡಿದರು.
ಈಶ್ವರಪ್ಪ ಅವರ ಒತ್ತಾಸೆಗೆ ಸ್ಪಂದಿಸಿದ ಸಚಿವರು; ಶಾಲಾ ಕಾಲೇಜು ಮಾತ್ರವಲ್ಲ, ಶಿಕ್ಷಣದ ಎಲ್ಲಾ ಹಂತಗಳಲ್ಲಿಯೂ ಭಗವದ್ಗೀತೆ ಪಾಠವಾಗಬೇಕು. ಅದಕ್ಕೆ ಅಗತ್ಯ ಕ್ರಮ ವಹಿಸುವ ಬಗ್ಗೆ ನಾನು ಕೇಂದ್ರದ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ಅದಕ್ಕೂ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ಹೊರಳು ದಾರಿಯಲ್ಲಿರುವ ಸಮಾಜವನ್ನು ಸರಿ ದಾರಿಯಲ್ಲಿ ನಡೆಸಲು ರಾಮಾಯಣ ಮತ್ತು ಮಹಾಭಾರತವನ್ನು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಹಿಂಸೆ, ಅಶಾಂತಿಯನ್ನು ತೊಡೆದು ಹಾಕಲು ಭಾರತದ ಅಸ್ಮಿತೆಯ ಪ್ರತೀಕವಾದ ಜೀವನ ಆದರ್ಶಗಳ ಮೂಲನೆಲೆಯಾದ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಬೋಧನೆ ಮಾಡಬೇಕಾದ ಅಗತ್ಯ ಇದೆ. ನೀನು ಯಕಶ್ಚಿತ್, ನಿನ್ನ ಕೆಲಸ ನೀನು ಮಾಡು ಎಂದು ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ಮಾಡುತ್ತಾನೆ. ಈ ಮಾತು ಕಲಿಯುಗದಲ್ಲಿಯೂ ಎಲ್ಲರಿಗೂ ಬೆಳಕು ಎಂದು ಸಚಿವರು ಪ್ರತಿಪಾದಿಸಿದರು.
ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿ ಭಗವದ್ಗೀತೆ ಪಠಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಧಾನಿಗಳು ಸ್ವತಃ ಗೀತೆಯನ್ನು ಪಠಿಸಿದರು. ನಮ್ಮ ಧರ್ಮ, ಪರಂಪರೆಯ ರಕ್ಷಣೆಯ ವಿಚಾರದಲ್ಲಿ ಈ ಮೂಲಕ ಅವರು ಸ್ಪಷ್ಟ ಸಂದೇಶ ನೀಡಿದ್ದರು. ಅದು ನಮಗೆಲ್ಲರಿಗೂ ಮೇಲ್ಪಂಕ್ತಿ ಆಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ನಮ್ಮ ಬಾಲ್ಯದಲ್ಲಿ ಮನೆಯಲ್ಲಿ ಹಿರಿಯರು ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳುತ್ತಿದ್ದರು. ಅದೇ ರೀತಿ ಶಾಲೆಗಳಲ್ಲಿಯೂ ನಮಗೆ ಈ ಕಥೆಗಳನ್ನು ಶಿಕ್ಷಕರು ಕೂಡ ಹೇಳುತ್ತಿದ್ದರು. ಆದರೆ, ಈಗ ಅಂತಹ ಉತ್ತಮ ಪರಿಪಾಠ ಇಲ್ಲವಾಗಿದೆ. ಬೆಳಗ್ಗೆ ಸುದ್ದಿವಾಹಿನಿಗಳನ್ನು ಹಾಕಿದರೆ ಬರೀ ಕೆಟ್ಟ ಸುದ್ದಿಗಳೇ ಬರುತ್ತವೆ.
ಮನಸ್ಸನ್ನು ಕೆಡಿಸುವ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವ ವಾತಾವರಣವನ್ನು ಹೋಗಲಾಡಿಸಬೇಕಿದೆ. ಅದಕ್ಕೆ ಭಗವದ್ಗೀತೆಯನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಹೇಳಬೇಕು. ಜತೆಗೆ ರಾಮಾಯಣ, ಮಹಾಭಾರತವನ್ನು ತಿಳಿಸಬೇಕಿದೆ ಎಂದು ಸಚಿವರು ಪ್ರತಿಪಾದಿಸಿದರು.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಮೊಗ್ಗದ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಪರಮಪೂಜ್ಯ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಅವರು, ಸಂಸದರಾದ ಬಿ.ವೈ. ರಾಘವೇಂದ್ರ ಅವರು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.