ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಡಿ.ಕೆ.ಶಿವಕುಮಾರ್ (D.K. Shivakumar) ಅವರು ಸಿಎಂ ಆಗಲೆಂದು ಒಕ್ಕಲಿಗ ಮಠದ ಶ್ರೀಗಳು ದನಿ ಎತ್ತಿರುವುದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ಪವರ್ ಶೇರಿಂಗ್ ವಿಚಾರವಾಗಿ ಉಂಟಾಗಿದ್ದ ಗೊಂದಲಗಳಿಗೆ ಹೈಕಮಾಂಡ್ ಸೂಚನೆಯಂತೆ ನಿನ್ನೆ ಸಿಎಂ ಸಿದ್ದರಾಮಯ್ಯ (Cmsiddaramaiah) ಡಿಸಿಎಂ ಡಿ.ಕೆ. ಶಿವಕುಮಾರ್ (DCM D.K. Shivakumar) ಬ್ರೇಕ್‌ಫಾಸ್ಟ್ ಮಿಟಿಂಗ್ ನಡೆಸಿ ಕದನ ವಿರಾಮ ಘೋಷಣೆಯಾಗಿದೆ. ಆದರೆ ಈಗ ಡಿ.ಕೆ. ಶಿವಕುಮಾರ್ ಅವರಿಹೆ ಒಕ್ಕಲಿಗ ಶ್ರೀಗಳ ಬೆಂಬಲ ನೀಡಿರುವುದು ಚರ್ಚೆಯಾಗುತ್ತಿದೆ.
ಒಕ್ಕಲಿಗ ಸಮುದಾಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಕೂಡಾ ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಮಾತನಾಡಿ ಬೆಂಬಲ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ: ನಿರ್ಮಲಾನಂದನಾಥ ಸ್ವಾಮೀಜಿ
ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಶ್ರಮಿಸಿದ್ದಾರೆ. ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗದಿದ್ದರೆ ಬೇಸರವಾಗಲಿದೆ.
ಪಕ್ಷ ಅಧಿಕಾರಕ್ಕೆ ತಂದ ಹೋರಾಟಗಾರ ಡಿ.ಕೆ. ಶಿವಕುಮಾರ್ ಅವರೇ ಮುಂದಿನ 2.5 ವರ್ಷ ಸಿಎಂ ಆಗಲಿದ್ದಾರೆ. ಅವರಿಗೆ ಸಿಎಂ ಸ್ಥಾನ ಅವಕಾಶ ಸಿಗುವ ಭರವಸೆ ಇತ್ತು. ಅವರನ್ನು ಮುಖ್ಯಮಂತ್ರಿ ಆಗಿ ಮಾಡಬೇಕು. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದ್ದಾರೆ.
ಕೊಟ್ಟ ಮಾತಿಗೆ ತಪ್ಪಿನಡೆದರೆ ಆ ಪರಮಾತ್ಮ ಮೆಚ್ಚಲ್ಲ: ನಂಜಾವಧೂತ ಸ್ವಾಮೀಜಿ
ಕೊಟ್ಟ ಮಾತಿಗೆ ತಪ್ಪಿನಡೆದರೆ ಆ ಪರಮಾತ್ಮ ಮೆಚ್ಚಲ್ಲ ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ನಂಜಾವಧೂತ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ರಾಜಕಾರಣಿಗಳು ರಾಜಕಾರಣ ಮಾಡಲಿ, ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಲಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಒಕ್ಕಲಿಗ ಮಠಗಳ ಶ್ರೀಗಳು ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲೆಂದು ಹಾರೈಸಿರುವುದಕ್ಕೆ ಕೆಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ಎನ್ ಡಿಎ ಸಮನ್ವಯ ಸಮಿತಿ ಸಭೆಯ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ. ಅವರಿಗೆ ಇದರಲ್ಲಿ ಏನೂ ಕೆಲಸ ಇಲ್ಲ ಎಂದಿದ್ದಾರೆ.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಅಧಿಕಾರ ಹೋದಾಗ ಯಾವ ಮಠಾಧಿಪತಿಗಳ ನೆರವನ್ನು ನಾನು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ.
ಒಕ್ಕಲಿಗ ಸಮಾಜ ಅಷ್ಟೇ ಅಲ್ಲ, ಬೇರೆ ಯಾವುದೇ ಸಮಾಜದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಜಾತಿ ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಅದಕ್ಕೆ ಯಾರೂ ಕಾರಣ ಆಗಬಾರದು. ನಾನು ಧರ್ಮಗುರುಗಳಿಗೆ ಮನವಿ ಮಾಡುವುದು ಇಷ್ಟೇ. ಸಮಾಜದಲ್ಲಿ ಶಾಂತಿ ನೆಮ್ಮದಿ ಮುಖ್ಯ. ಜಾತಿ ಮತ್ತು ಧರ್ಮ ಸಂಘರ್ಷ ಮಾಡಬಾರದು. ಅದು ರಾಜ್ಯಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ ಧರ್ಮಗಳನ್ನು ಎಳೆದು ತರೋದು ಬೇಕಾಗಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ನಷ್ಟ ರಾಜಕಾರಣ ಮಾಡುವವರಿಗೆ ಆಗುವುದಿಲ್ಲ. ರಾಜ್ಯಕ್ಕೆ ದೊಡ್ಡ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಮುಜುಗರ ಅಲ್ಲ. ಕರ್ನಾಟಕ ಜನತೆಗೆ ಆಗುವ ಮುಜುಗರ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ?: ಡಿ.ಕೆ. ಶಿವಕುಮಾರ್ ತಿರುಗೇಟು
ಇನ್ನೂ ಕುಮಾರಸ್ವಾಮಿ ಅವರ ಆಕ್ರೋಶದ ನುಡಿಗಳಿಗೆ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಕುಮಾರಸ್ವಾಮಿ ಅವರು ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ, ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ” ಎಂದು ಛೇಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ನಿಮ್ಮ ಪರವಾಗಿ ಸ್ವಾಮೀಜಿಗಳು ಧ್ವನಿ ಎತ್ತಿರುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂದು ಕೇಳಿದಾಗ, “ಹೌದಾ.. ಪಾಪ, ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೇ? ಅಂದು ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ?” ಎಂದು ತಿರುಗೇಟು ನೀಡಿದರು.
ನಾನು ಸ್ವಾಮೀಜಿ ಬೆಂಬಲ ಕೇಳಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಕೇಳಿದ್ದೇನಾ? ನಾನು ಕೂಡ ಯಾರ ಬೆಂಬಲ ಕೇಳಿಲ್ಲ. ಅವರು ಪ್ರೀತಿಯಿಂದ ಮಾತಾಡಿದರೆ ಬೇಡ ಎನ್ನಲು ಸಾಧ್ಯವೇ..? ನಾನು ಒಂದು ಸಮುದಾಯದಲ್ಲಿ ಹುಟ್ಟಿದ್ದರೂ ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಬಾಳೆಹೊನ್ನೂರು ಸ್ವಾಮಿಜಿ, ಶ್ರೀಶೈಲ ಸ್ವಾಮೀಜಿಗಳು ಸೇರಿದಂತೆ ಸಾಕಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ, ವಿಶ್ವಾಸ ಇದೆ. ಹೀಗಾಗಿ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳು ಕೂಡ ದೊಡ್ಡ ಸಮಾವೇಶದಲ್ಲಿ ಬಹಿರಂಗವಾಗಿ ಆಶೀರ್ವಾದ ಮಾಡಿದರು. ಧರ್ಮಸ್ಥಳಕ್ಕೆ ಹೋದಾಗಲೂ ನನಗೆ ಬೆಂಬಲ ನೀಡಿದರು. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಒಟ್ಟಾರೆ ಒಕ್ಕಲಿಗ ಡಿ.ಕೆ. ಶಿವಕುಮಾರ್ ಅವರ ಪರ ಸಮುದಾಯದ ಶ್ರೀಗಳು ದನಿ ಎತ್ತಿರುವುದು ಕುಮಾರಸ್ವಾಮಿ ಅವರ ಆಕ್ಷೇಪಕ್ಕೆ ಕಾರಣವಾಗಿದೆ. ಈಗಾಗಲೇ ಡಿ.ಕೆ. ಸಿಎಂ ಆದರೆ ಜೆಡಿಎಸ್‌ಗೆ ಸಂಕಷ್ಟ ಎದುರಾಗಲಿದೆ ಎಂಬ ಮಾತು ವ್ಯಾಪಕವಾಗಿದೆ. ಇದರ ಬೆನ್ನಲ್ಲೇ ಶ್ರೀಗಳ ನಿಲುವಿನ ಕುರಿತು ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗಳು ಸಾಕ್ಷಿಯಾಗುತ್ತಿದೆ ಎನ್ನಲಾಗುತ್ತಿದೆ.