ದೊಡ್ಡಬಳ್ಳಾಪುರ (Doddaballapura): ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವು ಧಾರ್ಮಿಕ, ನೈತಿಕ, ಮತ್ತು ಸಾಮಾಜಿಕ ಮೌಲ್ಯಗಳಿಂದ ವಿಶ್ವವಿಖ್ಯಾತವಾಗಿವೆ ಎಂದು ಜ್ಞಾನ ಗಂಗಾ ಸಾಹಿತ್ಯ ರಂಗ ವೇದಿಕೆಯ ಅಧ್ಯಕ್ಷ ಮಣ್ಣೆ ಮೋಹನ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ಕವಯಿತ್ರಿ ಎಂ.ಬಿ.ಯಶೋಧಮ್ಮ ಅವರ ಕವನ ಸಂಕಲನ ಪ್ರಣವ ಭಾನು ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಭವ್ಯ ಪರಂಪರೆಯ ಕಲೆ, ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕತೆಗಳನ್ನು ಸೃಷ್ಟಿ ಮಾಡಿದವರು ಎಂದಿಗೂ ಪೂಜ್ಯನೀಯರು. ಇಂದಿನ ಮಕ್ಕಳನ್ನು ನಾವು ಭಾರತೀಯ ಸಂಸ್ಕೃತಿಯ ಪ್ರಚಾರಕರಾಗಿ ಮಾಡಬೇಕಾಗಿದೆ ಎಂದರು.
ಕನ್ನಡ ನಾಡಿನ ರಾಜರುಗಳ ಸಾಮ್ರಾಜ್ಯ ವಿಸ್ತರಣೆ ಮತ್ತು ಆಳ್ವಿಕೆ ಕನ್ನಡಿಗರಿಗೆ ಹೆಗ್ಗಳಿಕೆ ವಿಚಾರವಾಗಿದೆ. ಕನ್ನಡ ನಾಡು ನುಡಿಗೆ ಕನ್ನಡ ರಾಜರುಗಳ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು-ನುಡಿಯ ವೈಭವದ ಬಗ್ಗೆ ಕನ್ನಡಿಗರು ಸದಾ ಹೆಮ್ಮೆ ಪಡುತ್ತಾರೆ. ಕನ್ನಡ ಕವಿಗಳ ಕಾವ್ಯಧಾರೆ ನಿರಂತರವಾಗಿ ಹರಿಯುತ್ತಿದೆ. ಕನ್ನಡ ಕವಿಗಳು ತಮ್ಮ ಸೃಜನಶೀಲತೆಯಿಂದ ಕನ್ನಡ ಕಾವ್ಯ ಲೋಕವನ್ನು ವೈವಿಧ್ಯಗೊಳಿಸಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ಮಾತನಾಡಿ, ಕವಯಿತ್ರಿ ಎಂ.ಬಿ. ಯಶೋಧಮ್ಮ ಅವರ ಪ್ರಣವ ಭಾನು ಕವನ ಸಂಕಲನ ಸಹೃದಯರ ಮನದಲ್ಲಿ ಆಲೋಚನೆ ಶಕ್ತಿಯನ್ನು ವೃದ್ಧಿಸುತ್ತದೆ.
ಕವಿತೆಗಳಲ್ಲಿ ಸಮಾಜದ ಸಮಸ್ಯೆಗಳು, ಮಾನವ ಭಾವನೆಗಳು ಮತ್ತು ಜೀವನದ ಅನುಭವಗಳನ್ನು ಒಳಗೊಂಡಿವೆ.ಕವನ ಸಂಕಲನದಲ್ಲಿರುವ ಕವಿತೆಗಳ ಶೈಲಿ, ನಿರೂಪಣೆ ಉತ್ತಮವಾಗಿದೆ. ಕನ್ನಡ ಸಾಹಿತ್ಯಕ್ಕೆ ಕವಯಿತ್ರಿಯರ ಕೊಡುಗೆ ಅಪಾರವಾಗಿದೆ, ಮಹಿಳಾ ಸಾಹಿತಿಗಳು ವಿವಿಧ ಪ್ರಕಾರಗಳಲ್ಲಿ ವೈವಿಧ್ಯಮಯ. ಸಾಹಿತ್ಯವನ್ನು ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರೊ.ಚಂದ್ರಪ್ಪ ಮಾತನಾಡಿ, ಕವಿಗಳು ಮತ್ತು ಬರಹಗಾರರು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅನನ್ಯತೆ ಅರಿವು, ಲೋಕಾನುಭವದ ಜೊತೆಗೆ ಮಾನವೀಯತೆ, ಸಾಮಾಜಿಕ ಪ್ರಜ್ಞೆ ಹೊಂದಿರಬೇಕು. ಕಾವ್ಯವು ಜನರನ್ನು ತಲುಪಿದಾಗ ಮಾತ್ರ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ಬದುಕಿನ ಅನುಭವಗಳನ್ನು, ವೈಯಕ್ತಿಕ ಚಿಂತನೆಗಳನ್ನು, ಮತ್ತು ಸಮಾಜದ ವಾಸ್ತವವನ್ನು ಅಭಿವ್ಯಕ್ತಿಗೊಳಿಸುವ ಕವಿ ಸಮಾಜಮುಖಿ ಜೀವನ ಶೈಲಿ ಹೊಂದಿರಬೇಕು ಎಂದರು.

ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಪರಿಣಿತ ನೃತ್ಯ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕೃಷಿಕರಾದ ಎಂ.ಪಿ.ಬಸವರಾಜು ಅವರು ಪ್ರಣವ ಭಾನು ಕವನ ಸಂಕಲನ ಬಿಡುಗಡೆ ಮಾಡಿದ ಸಮಾರಂಭದಲ್ಲಿ ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ, ಕವಯಿತ್ರಿ ಎಂ.ಬಿ.ಯಶೋಧಮ್ಮ, ಶಿಕ್ಷಕ ಅಶೋಕಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಜಿ.ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ವಿ.ಚಂದ್ರಪ್ಪ, ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ವಿ.ಎಸ್. ಹೆಗಡೆ ಮುಂತಾದವರು ಭಾಗವಹಿಸಿದ್ದರು.