ದೆಹಲಿ: ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಬಳಕೆದಾರರ ಉತ್ತರದಾಯಿತ್ವ ಖಚಿತಪಡಿಸಲು ಕೇಂದ್ರದ ಎನ್‌ಡಿಎ ಸರಕಾರ ಮಹತ್ವದ ಕ್ರಮ ಕೈಗೊಂಡಿದ್ದು, ವಾಟ್ಸಾಪ್, ಟೆಲಿಗ್ರಾಂ (WhatsApp, Telegram) ಬಳಕೆದಾರರಿಗೆ ಅನಿರ್ವಾರ್ಯತೆ ಎದುರಾಗಿದೆ.
ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ ಮೊದಲಾದ ಮೆಸೇಜಿಂಗ್ ಅಪ್ಲಿಕೇಶನ್ ಆಧಾರಿತ ಸಂವಹನ ಸೇವೆಗಳನ್ನು ಸಿಮ್ ಸಕ್ರಿಯವಾಗಿದ್ದರಷ್ಟೇ ಒದಗಿಸಬೇಕು.
ಈ ಸೇವೆಗಳನ್ನು ಭಾರತದಲ್ಲಿ ಒದಗಿಸುವ ಸೇವಾಸಂಸ್ಥೆಗಳೇ ಇದನ್ನು ಖಚಿತಪಡಿಸಿ ಕೊಂಡು ಸೇವೆ ಒದಗಿಸಬೇಕು ಎಂದು ಕೇಂದ್ರ ಸರಕಾರ ಸ್ಪಷ್ಟ ನಿರ್ದೇಶನ ಹೊರಡಿಸಿದೆ.
ಅಪ್ಲಿಕೇಶನ್ ಆಧರಿಸಿ ಸಂವಹನ ಸೇವೆಗಳನ್ನು ಒದಗಿಸುವ ಎಲ್ಲಾ ಕಂಪನಿಗಳು ಈ ವಿಚಾರದಲ್ಲಿ ಕ್ರಮ ಕೈಗೊಂಡ ಬಗ್ಗೆ ದೂರಸಂಪರ್ಕ ಇಲಾಖೆಗೆ 120 ದಿನಗಳೊಳಗೆ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಿಯಮ ಪಾಲಿಸದೇ ಇದ್ದರೆ ದೂರಸಂಪರ್ಕ ಕಾಯಿದೆ- 2023ರ ಟೆಲಿಕಾಂ ಸೈಬರ್ ಭದ್ರತಾ ನಿಯಮಗಳು ಮತ್ತು ಇತರೆ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.