ಬೆಂಗಳೂರು: ಬೆಳಗಾವಿ ಅಧಿವೇಶದಲ್ಲಿ ಸರ್ಕಾರ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ
ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಇಂದು ಚರ್ಚಿಸಲಾಗಿದೆ.
ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು.
ಕಬ್ಬು ಮತ್ತು ಮೆಕ್ಕೆ ಜೋಳ ಖರೀದಿ
ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ರೈತರು, ರೈತ ಮುಖಂಡರು,ಕಾರ್ಖಾನೆ ಮಾಲಿಕರ ಜೊತೆ ಚರ್ಚಿಸಿ, ಸಮಸ್ಯೆಯ ಪರಿಹಾರಕ್ಕೆ ಅಂತಿಮ ರೂಪವನ್ನು ನೀಡಲಾಗಿದೆ. ಕಬ್ಬು ಒಂದು ಟನ್ ಗೆ ಸರ್ಕಾರದಿಂದ 50 ರೂ. ನಿಗದಿಪಡಿಸಲಾಗಿದೆ.
ಮೆಕ್ಕೆ ಜೋಳ ಖರೀದಿಯ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ.ಗಳನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಿದೆ. ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗಿರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶುಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದರು.
ಈ ಬಾರಿ ರೈತರು ಮೆಕ್ಕೆ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಸುಮಾರು 55 ಲಕ್ಷ ಮೆ.ಟನ್ ಉತ್ಪಾದನೆಯಾಗುವ ಅಂದಾಜಿದೆ ಎಂದರು.
ರಾಜ್ಯ ಸಂಸದರ ಸಭೆ
ಪೌಲ್ಟ್ರಿ 20 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವ ನಿರೀಕ್ಷೆಯಿದೆ. ಪಶುಆಹಾರ 4-5 ಲಕ್ಷ ಟನ್ ಹಾಗೂ 7-10 ಲಕ್ಷದ ಎಥನಾಲ್ ಗಾಗಿ ಬಳಸುತ್ತಾರೆ. ಇದೆಲ್ಲಾ ಕೇಂದ್ರ ಸರ್ಕಾರ ಮಾಡಬೇಕು .ಎಥನಾಲ್ ಹಾಗೂ ಎಂ ಎಸ್ ಪಿ, ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರದವರು ನಮಗೇನು ಜವಾಬ್ದಾರಿ ಇಲ್ಲವೆಂಬಂತೆ ಮಾತನಾಡುತ್ತಾರೆ.
ಸಂಸದರ ಸಭೆ ಕರೆಯಬೇಕು ಎಂದು ಚರ್ಚಿಸಲಾಗಿದ್ದು, ಡಿಸೆಂಬರ್ 8 ರಂದು ಸಂಸತ್ತು ಮುಂದೂಡಬಹುದೆಂದು ಭಾವಿಸಿದ್ದು, ಅಂದೇ ಸಭೆ ಕರೆಯಬೇಕೆಂದು ತೀರ್ಮಾನಿಸಲಾಗಿದೆ ಎಂದರು. ಏಕೆಂದರೆ ಅಂದು ರಾಜ್ಯದ ಸಂಸದರು ಅಲ್ಲಿಯೇ ಉಪಸ್ಥಿತರಿರುತ್ತಾರೆ ಎಂದರು.
ಹೈ ಕಮಾಂಡ್ ಭೇಟಿ
ಸಮಯ ಸಿಕ್ಕು ಭೇಟಿಗೆ ಅವಕಾಶ ನೀಡಿಯೇ ಹೈ ಕಮಾಂಡ್ ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತೇವೆ ಎಂದರು.
ಉಪಮುಖ್ಯಮಂತ್ರಿಗಳ ಮನೆಯ ಉಪಾಹಾರದಲ್ಲಿ ಮಾಂಸಾಹಾರವಿತ್ತು, ನಮ್ಮ ಮನೆಯಲ್ಲಿ ಸಸ್ಯಾಹಾರದ ಉಪಾಹಾರವಿತ್ತು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಹಾಗೂ ಇಂದೂ ಕೂಡ ಚರ್ಚಿಸಲಾಗಿದೆ ಎಂದರು.
ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ
ಶಾಸಕರು ಹಾಗೂ ಸಚಿವರಿಗೆ ಇದನ್ನೇ ಹೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಸಿಎಲ್. ಪಿ ಸಭೆ ಕರೆದಾಗ ಎಲ್ಲರೂ ಊಟಕ್ಕೆ ಸೇರುತ್ತೇವೆ ಎಂದರು.
ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರು
ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.
ಪರಮೇಶ್ವರ್ ಅವರು ಸಿಎಂ ಹಾಗೂ ಡಿಸಿಎಂ ಅವರನ್ನು ಉಪಾಹಾರಕ್ಕೆ ಕರೆಯುವುದಾಗಿ ಹೇಳಿರುವ ಬಗ್ಗೆ ಮಾತನಾಡಿ ಅದನ್ನು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತಾರೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ
“ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಾಹಾರ ಕೂಟದಲ್ಲಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ, ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳು ಸೇರಿದಂತೆ ಪಕ್ಷ, ಸರ್ಕಾರ ಹಾಗೂ ರಾಜಕೀಯ ವಿಚಾರಗಳ ಕುರಿತು ಉಪಹಾರ ಕೂಟದಲ್ಲಿ ಚರ್ಚೆ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉಪಾಹಾರ ಕೂಟದ ಬಳಿಕ ಶಿವಕುಮಾರ್ ಅವರು ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದರು.
“ನಾನು ಮುಖ್ಯಮಂತ್ರಿಗಳನ್ನು ಉಪಾಹಾರ ಕೂಟಕ್ಕೆ ಬರುವಂತೆ ಮೊದಲು ಕರೆದಿದ್ದೆ. ಅವರು ಮೊದಲು ನೀವೇ ನಮ್ಮ ಮನೆಗೆ ಬನ್ನಿ, ಆಮೇಲೆ ಬರುತ್ತೇನೆ ಎಂದಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿದ್ದೆ. ಇಂದು ನಮ್ಮ ಮನೆಗೆ ಆಹ್ವಾನಿಸಿದ್ದೆ. ನಾವಿಬ್ಬರೂ ಬಹಳ ಸಂತೋಷದಿಂದ ಉಪಹಾರ ಸೇವಿಸಿದ್ದೇವೆ. ಈ ವೇಳೆ ರಾಜಕೀಯವಾಗಿಯೂ ಚರ್ಚೆ ಮಾಡಿದ್ದೇವೆ. ಪದವೀಧರ ಹಾಗೂ ಶಿಕ್ಷಕರ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ನಾವಿಬ್ಬರೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವನ್ನು ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
“ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು, ಶಾಸಕರಿಗೆ ನೀಡಬೇಕಾದ ಸಂದೇಶಗಳು, ವಿರೋಧ ಪಕ್ಷಗಳು ಯಾವೆಲ್ಲಾ ವಿಚಾರ ಪ್ರಸ್ತಾಪಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರು, ನಾವು ಒಂದೇ ಧ್ವನಿಯಲ್ಲಿ ಎದುರಿಸಲು ಸಿದ್ಧರಿದ್ದೇವೆ” ಎಂದರು.
“ಇನ್ನು ದೆಹಲಿಗೆ ಹೋಗಿ ಸರ್ವಪಕ್ಷ ಸಂಸದರ ಸಭೆ ನಡೆಸುವ ಬಗ್ಗೆ ಚರ್ಚೆ ಮಾಡಿದ್ದು, ಡಿ.8 ರಂದು ದೆಹಲಿಗೆ ಹೋಗಿ ವಾಪಸ್ಸಾಗಬೇಕು ಎಂದು ತೀರ್ಮಾನಿಸಿದ್ದೇವೆ. ಮೇಕೆದಾಟು ವಿಚಾರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಮೆಕ್ಕೆಜೋಳ ದರ ವಿಚಾರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರವಾಗಿ ಸಂಸದರ ಜತೆ ಚರ್ಚೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕಾಗಿದೆ. ಈ ಸಭೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನು ಹಾಗೂ ಜೆಡಿಎಸ್ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
ನಿಮ್ಮ, ನಿಮ್ಮ ಪರವಾಗಿ ನಿಂತಿದ್ದ ಪಕ್ಷದ ಶಾಸಕರು, ಸಚಿವರು ಒಂದಾಗಿ ಸಾಗುತ್ತಾರಾ ಎಂದು ಕೇಳಿದಾಗ, “ನಮ್ಮ ಪಕ್ಷದಲ್ಲಿ ಯಾರೂ ಬೇರೆಯಾಗಿಲ್ಲ. ನೀವುಗಳು (ಮಾಧ್ಯಮಗಳು) ಬೇರೆ ಮಾಡುತ್ತಿದ್ದೀರಿ” ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸದನದಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, “ಅವರು ಮಾಡಲಿ, ಯಾವ ವಿಚಾರಕ್ಕೆ ಮಾಡುತ್ತಾರೆ? ಅವರದ್ದು ಖಾಲಿ ಟ್ರಂಕ್” ಎಂದರು.
ಸಮಯ ಸಿಕ್ಕರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಅವರು ಕರೆದರೆ ಹೋಗಿ ಭೇಟಿ ಮಾಡುತ್ತೇವೆ” ಎಂದು ತಿಳಿಸಿದರು.
ಆರ್.ವಿ ದೇವರಾಜ್ ಅವರಿಗೆ ಸಂತಾಪ
ಆರ್.ವಿ ದೇವರಾಜ್ ಅವರ ನಿಧನದ ಬಗ್ಗೆ ಕೇಳಿದಾಗ, ಆರ್.ವಿ. ದೇವರಾಜ್ ಹಾಗೂ ನಾವು ಬಹಳ ವರ್ಷಗಳಿಂದ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ. ಸೇವಾದಳದ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು. 1989ರಲ್ಲಿ ಅವರು ಶಾಸಕರಾಗಿದ್ದರು. ನಂತರ ಕೆಎಸ್ಆರ್ ಟಿಸಿ ಅದ್ಯಕ್ಷರಾಗಿದ್ದರು. ನಂತರ ಅವರು ತಮ್ಮ ಕ್ಷೇತ್ರವನ್ನು ಎಸ್.ಎಂ ಕೃಷ್ಣ ಅವರಿಗೆ ಬಿಟ್ಟುಕೊಟ್ಟಿದ್ದರು. ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮವಿದ್ದರೂ ಕೆ.ಆರ್ ಮಾರುಕಟ್ಟೆಯಿಂದ ಹೂವನ್ನು ಕಳುಹಿಸಿಕೊಡುತ್ತಿದ್ದರು. ಮೂರು ದಿನಗಳ ಹಿಂದೆ ನಮ್ಮ ಮನೆಗೆ ಬಂದು ಭೇಟಿ ಮಾಡಿದ್ದರು. ಅವರು ಪ್ರಬುದ್ಧವಾದ ಹಿಂದುಳಿದ ವರ್ಗದ ನಾಯಕರಾಗಿದ್ದರು. ಎಲ್ಲಾ ಸಮುದಾಯದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದರು.
ಅವರನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡಿದ್ದೇವೆ. ಕಳೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಅವರು ಸೋಲನುಭವಿಸಿದರು. ಅವರ ಪತ್ನಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಪುತ್ರ ಕಾರ್ಪೊರೇಟರ್ ಆಗಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರು, ಅಭಿಮಾನಿಗಳು ಕಾರ್ಯಕರ್ತರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ತಿಳಿಸಿದರು.