ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರಕಾರದ ಚಳಿ ಬಿಡಿಸುವ ಕುರಿತು ಈಗಾಗಲೇ ಚರ್ಚಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ B.Y. Vijayendra) ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ವಿಪಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸದನದ ಒಳಗಡೆ ಒಟ್ಟಾಗಿ ಸರಕಾರದ ಕಿವಿ ಹಿಂಡಲು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ತಿಳಿಸಿದರು. ಸದನದ ಹೊರಗಡೆಯೂ ಪ್ರತಿಭಟನೆ ನಡೆಯಲಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಡಿಸಿಎಂ ಮನೆಗೆ ತಿಂಡಿಗೆ ಹೋಗುವುದಾದರೆ ಅದರ ಬಗ್ಗೆ ನಾವೇನು ಪ್ರತಿಕ್ರಿಯೆ ನೀಡಲಿದೆ? ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಆ ಸಭೆಯಲ್ಲಿ ಏನು ಚರ್ಚೆ ಆಗುತ್ತದೆ? ಅದರ ಕುರಿತ ನಿಮ್ಮ ಮಾಹಿತಿ ಆಧಾರದಲ್ಲಿ ಪ್ರತಿಕ್ರಿಯೆ ಕೊಡೋಣ ಎಂದು ನುಡಿದರು.
ಬೆಂಗಳೂರಿನ ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರ ಸಭೆ ನಡೆಸಿದ್ದೇವೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸುರೇಶ್ ಕುಮಾರ್, ಗರುಡಾಚಾರ್, ಮುನಿರತ್ನ, ಮುನಿರಾಜು, ರಾಮಮೂರ್ತಿ- ಎಲ್ಲರ ನೇತೃತ್ವದಲ್ಲಿ ವಿಶೇóಷ ಸಭೆ ನಡೆಸಲಾಗಿದೆ.
ಮತದಾರರ ನೋಂದಣಿ ನಿಟ್ಟಿನಲ್ಲಿ ಶಾಸಕರ ಅಭಿಪ್ರಾಯ ಪಡೆದಿದ್ದೇವೆ ಎಂದರು.
ನಮ್ಮ ನಿಲುವು ಸ್ಪಷ್ಟವಿದೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಆದರೆ, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ತಿಳಿಸಿದರು.