ದೊಡ್ಡಬಳ್ಳಾಪುರ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾರವರು (School Games Federation of India) ಆಯೋಜಿಸಿದ್ದ, 69ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿನಿ ಹರ್ಷಿತಾ ಎಂ. ಬೆಳ್ಳಿಯ ಪದಕವನ್ನು ಪಡೆದು ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ 17ವರ್ಷದೊಳಗಿನ 35 KG ವಿಭಾಗದಲ್ಲಿ ಹರ್ಷಿತಾ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಬೆಳ್ಳಿ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಈ ಮೂಲಕ ಜನವರಿ 2026 ರಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಗೆ ಆಯ್ಕೆಯಾಗಿದ್ದಾರೆ. ಈ ವರ್ಷದಲ್ಲಿ ಕರ್ನಾಟಕದಿಂದ ಸಾಧನೆ ಮಾಡಿರುವ ಏಕೈಕ ವಿದ್ಯಾರ್ಥಿನಿ ಹರ್ಷಿತಾ ಎನ್ನಲಾಗಿದೆ.
“ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಹಾಗೂ ರಾಜ್ಯದಿಂದ ಪ್ರಪ್ರಥಮವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿನಿ ಹರ್ಷಿತಾ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಒಲಿದು ಬರಲಿ” ಎಂದು ಎಂಎಸ್‌ವಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಮಣ್ಯ ಅಭಿನಂದಿಸಿದರು.
ಪ್ರಾಂಶುಪಾಲರಾದ ರೆಮ್ಯ ಬಿ.ವಿ ಮಾತನಾಡಿ, “ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಘಟಾನುಘಟಿ ಸ್ಪರ್ಧಿಗಳ ನಡುವೆ ಸಾಧಿಸಿರುವ ಈ ಸಾಧನೆ ಕೇವಲ ಹರ್ಷಿತಾರ ಪರಿಶ್ರಮ ಹಾಗೂ ದೃಢ ಸಂಕಲ್ಪದ ಫಲಿತಾಂಶ. ಈಕೆ ಇನ್ನೂ ಮಹತ್ತರ ಸಾಧನೆ ಸಾಧಿಸಲಿ” ಎಂದು ಹರಸಿ ಅಭಿನಂದಿಸಿದರು.
ಶಾಲಾ ಉಪಾಧ್ಯಕ್ಷ ಸ್ವರೂಪ್ ಹಾಗೂ ಶಿಕ್ಷಕವೃಂದ, ಹರ್ಷಿತಾ ಎಂ. ಹಾಗೂ ಟೇಕ್ವಾಂಡೋ ತರಬೇತುದಾರರಾದ ಪರಮೇಶ್ವರ್ ಅವರನ್ನು ಅಭಿನಂದಿಸಿದ್ದಾರೆ.