ಮಡಿಕೇರಿ: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಮಹಿಳೆ ನೋಡಲು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ ಯುವಕನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.
ಈ ಕುರಿತು ಹಲ್ಲೆಗೊಳಗಾದ ಹೆಚ್.ಪಿ.ಮಹದೇವ (39 ವರ್ಷ) ಎಂಬಾತ ನೀಡಿದ ದೂರಿನ ಆಧಾರದಲ್ಲಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ರಚನ, ಆಕೆಯ ತಾಯಿ ಮಾಲತಿ, ಯುವತಿಯ ಸ್ನೇಹಿತರಾದ ದಿನೇಶ್, ಸುಜೀತ್, ದರ್ಶನ್, ಹಾಗೂ ಒಬ್ಬ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೂಲತಃ ಮಂಡ್ಯ ಮದ್ದೂರು ತಾಲೂಕಿನ ಬೆಂಗಳೂರಿನ ವಾಸವಿರುವ ಚಾಮರಾಜಪೇಟೆಯಲ್ಲಿ ಯುವಕ ಎಚ್.ಪಿ.ಮಹದೇವ ಎಂಬಾತನಿಗೆ ಕೆಲವು ಸಮಯದ ಹಿಂದೆ ಫೇಸ್ ಬುಕ್ ಮೂಲಕ ಮಡಿಕೇರಿ ಮಂಗಳದೇವಿ ನಗರ ನಿವಾಸಿ ರಚನ ಎಂಬಾಕೆಯ ಪರಿಚಯವಾಗಿತ್ತು.
ನಂತರ ಮಹಿಳೆ ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ನವೆಂಬರ್ 20 ಮತ್ತು 28ರಂದು ಕ್ರಮವಾಗಿ ತಲಾ 5 ಸಾವಿರದಂತೆ ಒಟ್ಟು 10 ಸಾವಿರ ರೂ. ಗೂಗಲ್ ಮತ್ತು ಫೋನ್ ಪೇ ಮೂಲಕ ರಚನ ಪಡೆದುಕೊಂಡಿದ್ದಳು.
ಈ ಹಣವನ್ನು ಮರಳಿ ಕೇಳಿದ ಸಂದರ್ಭ ಮೈಸೂರು ಅಥವಾ ಕುಶಾಲನಗರಕ್ಕೆ ಬರುವಂತೆ ರಚನ ಆಹ್ವಾನ ನೀಡಿದ್ದಳು. ಅದರಂತೆ ಶುಕ್ರವಾರ ರಾತ್ರಿ ಮಹದೇವ ಮಡಿಕೇರಿಗೆ ತೆರಳಿದ್ದು ರಾತ್ರಿ 10.30ರ ಸಮಯದಲ್ಲಿ ರಚನ ಮಹದೇವನನ್ನು ತನ್ನ ಮನೆಗೆ ಕರೆದುಕೊಂಡು ತೆರಳಿದ್ದಳಂತೆ.
ದಿನೇಶ್ ಫೋನ್ ಮೂಲಕ ದರ್ಶನ್ ಮತ್ತು ಸುಜೀತ್ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮಹದೇವನ ಬಟ್ಟೆ ಬಿಚ್ಚಿಸಿ ಅದನ್ನು ಸುಟ್ಟು ಹಾಕಿ ತಲೆಗೆ ಏರ್ ಗನ್ ಹಿಡಿದು ದೊಣ್ಣೆ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಮಹದೇವ 6 ಮಂದಿಯ ವಿರುದ್ದ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆಂದು ವರದಿಯಾಗಿದೆ.