
ದೊಡ್ಡಬಳ್ಳಾಪುರ: ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ನಳಂದ ಪ್ರೌಢಶಾಲೆ (Nalanda High School) ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳ (Little Angels Anantha School) ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ Human Computer ಎಂದೇ ಪ್ರಸಿದ್ಧಿಯಾಗಿರುವ ಬಸವರಾಜ್ ಶಂಕರ್ ರವರು ತಮ್ಮ ವಿಶೇಷ ಬುದ್ಧಿಮತ್ತೆಯಿಂದ ಗಣಿತದ ಹಲವು ಆಯಾಮಗಳನ್ನು ಪ್ರದರ್ಶಿಸಿದರು.

ಭಾರತೀಯ ಸೈನ್ಯದ ಮೇಜರ್ ರಾಘವೇಂದ್ರ ಸಿ ರವರು ಭಾರತದ ಮಿಲಿಟರಿ ಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಈ ವೇಳೆ ಎಸ್ ಎಸ್ ಎಲ್ ಸಿ- 2025 ರಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದ ಅಮೃತ ಎಮ್. ಎಸ್ ಮತ್ತು ಗಾನವಿ ಎಸ್ ಎಮ್ ರವರನ್ನು ಸನ್ಮಾನಿಸಲಾಯಿತು.

ಹತ್ತನೇ ತರಗತಿಯ ವಿದ್ಯಾರ್ಥಿನಿ ಪೃಥ್ವಿ ಶ್ರೀ ಆರ್ ಕಳೆದ 12 ವರ್ಷಗಳಿಂದಲೂ ಒಂದು ದಿನವೂ ಶಾಲೆಯನ್ನು ತಪ್ಪಿಸದೆ ಸಂಪೂರ್ಣ ಹಾಜರಾತಿಗಾಗಿ ಸನ್ಮಾನಿಸಲಾಯಿತು.

ಮೂರು ವರ್ಷದ ಮಕ್ಕಳು ಭಗವದ್ಗೀತೆಯನ್ನು ಪಠಿಸಿದ್ದು ವೀಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿತು.

ಅಂತರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗವು ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡಿತು.

ಜಯ ಭಾರತ ಜನನಿಯ ತನುಜಾತೆ ನೃತ್ಯರೂಪಕದಲ್ಲಿ ಕರ್ನಾಟಕ ವೈಭವವನ್ನು ಸಾದರಪಡೆಸಿದ್ದು ಕನ್ನಡಿಗರ ಹೆಮ್ಮೆ ಎನ್ನಿಸುವಂತಿತ್ತು.
ಹಸಿರು ವನ ರೂಪಕವು ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರಿಗೆ ಅರ್ಪಿತವಾಯಿತು.

ಶಾಲೆಯ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ ರವರು ಕಳೆದ 16 ವರ್ಷಗಳಿಂದಲೂ ನಿರಂತರವಾಗಿ ಹಾಜರಾತಿಯನ್ನು ಪಾಲಿಸಿದ್ದು ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್, ಪ್ರೊ ಸಾವಿತ್ರಿ ದೇವಿ, ಪ್ರೊ ಅನಂತ ಪ್ರಕಾಶ್ ಜಿಕೆ, ವಕೀಲೆ ವಿಜಯಮ್ಮ, ಜಸ್ಟೀಸ್ ಚಿಂತಾ ಕೆಜಿ, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಸಹಸ್ರಾರು ಸಂಖ್ಯೆಯಲ್ಲಿ ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.