
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ರಾಜ್ಯದಲ್ಲಿ ಸದ್ದಿಲ್ಲದೆ ಆರಂಭವಾಗಿದ್ದು, ಭಾರತ ಚುನಾವಣಾ ಆಯೋಗ (ಇಸಿಐ) ಆದೇಶದ ಅನ್ವಯ ನಡೆಯುತ್ತಿದೆ.
ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಮತ್ತು ಅನರ್ಹ ಮತದಾರರನ್ನು ಸೇರಿಸದಂತೆ ಖಚಿತಪಡಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕರ್ನಾಟಕದಲ್ಲಿ 2002ರಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗಿತ್ತು. ಮತದಾರರ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
2002 ರಲ್ಲಿ 3.4 ಕೋಟಿ ಮತದಾರರಿದ್ದರು, ಈ ಸಂಖ್ಯೆ ಇದೀಗ 5.4 ಕೋಟಿಯಾಗಿದೆ. ಹೀಗಾಗಿ ವ್ಯತ್ಯಾಸಗಳನ್ನು ಗುರುತಿಸಲು, ಪ್ರಸ್ತುತ 2025 ರ ಡೇಟಾವನ್ನು 2002ರ ಡೇಟಾದೊಂದಿಗೆ ಹೋಲಿಕೆ ಮಾಡಲಾಗುತ್ತದೆ.
ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲೆ ಬಿಸಿ
ಎಐಆರ್ ಪ್ರಕ್ರಿಯೆಗೆ ಶಾಲಾ ಅವಧಿಯ ನಡುವೆಯೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡಿರುವುದು ಒತ್ತಡದ ಕೆಲಸವಾಗಿದೆ.
ಪ್ರಮುಖವಾಗಿ ಆನ್ಲೈನ್ ಮೂಲಕ 2002 ಬಳಿಕ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವವರ ದಾಖಲೆ ಸಂಗ್ರಹ ತಲೆ ನೋವಾಗಿದೆ.
ಅದರಲ್ಲಿಯೂ 2002 ಬಳಿಕ ಮದುವೆಯಾಗಿ ಗಂಡನ ಮನೆಗೆ ಬಂದಿರುವ ಗೃಹಣಿಯರ ಪೋಷಕರ ದಾಖಲೆ ಸಂಗ್ರಹ ದೊಡ್ಡ ತಲೆ ಬಿಸಿ ಎದುರಾಗಿದ್ದು, ಕ್ಷೇತ್ರದ ಸಂಖ್ಯೆ, ವಾರ್ಡ್ ಸಂಖ್ಯೆ, ಪೋಷಕರ ಕ್ರಮ ಸಂಖ್ಯೆ ನಮೂದು ಮಾಡುವುದು ಕಡ್ಡಾಯವಾಗಿದ್ದು, ಈ ದಾಖಲೆ ಪಡೆಯುವುದಕ್ಕೆ ಪರದಾಡುವಂತಾಗಿದೆ.
ಏಕೆಂದರೆ, 2002 ರ ನಂತರ ಬೇರೆ ತಾಲೂಕು, ಜಿಲ್ಲೆ, ರಾಜ್ಯಗಳಿಂದ ಮದುವೆಯಾಗಿ ಗಂಡನ ಮನೆಗೆ ಬಂದಿರುವ ಮಹಿಳೆಯರ ದಾಖಲೆ ಸಂಗ್ರಹ ತೀವ್ರ ತೊಂದರೆಗೆ ಕಾರಣವಾಗಿದ್ದು, ಗಂಡನ ಹೆಸರಿಗೆ ಮ್ಯಾಚ್ ಮಾಡದೇ, ಪೋಷಕರ ಕುರಿತಾದ 2002 ದಾಖಲೆ ಸಂಗ್ರಹ ಸಂಕಷ್ಟಕ್ಕೆ ಕಾರಣವಾಗಿದೆ.
ಇನ್ನೂ ಅನೇಕ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಇಂದಿಗೂ ಆಂಡ್ರಾಯ್ಡ್ ಮೊಬೈಲ್ ಬಳಕೆ ದುಸ್ವಪ್ನವಾಗಿದ್ದು, ನೆಟ್ವರ್ಕ್ ಸಮಸ್ಯೆಯ ನಡುವೆಯೂ ಆನ್ಲೈನ್ ಮೂಲಕವೇ ಮತದಾರರ ಚೀಟಿ ಹೊಂದಾಣಿಕೆ ಮಾಡಲು ಪರದಾಡುತ್ತಿದ್ದಾರೆ.