ಮೈಸೂರು: ಐವರು ಮುಸುಕುಧಾರಿಗಳ ತಂಡವೊಂದು ಹಾಡಹಗಲೇ ಚಿನ್ನದ ಅಂಗಡಿಗೆ (Gold Shop) ನುಗ್ಗಿ ಸಿನಿಮೀಯ ಶೈಲಿಯಲ್ಲಿ (Cinematic Style) ದರೋಡೆ (Robbery) ಮಾಡಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣ ಸಮೀಪ ವಿರುವ ಸೈಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗೆ ನುಗ್ಗಿದ ಮುಸುಕುಧಾರಿಗಳು ಚಿನ್ನದ ಅಂಗಡಿ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ್ದಾರೆ, ಸುಮಾರು 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚಿನ್ನದ ಅಂಗಡಿ ದರೋಡೆ ಪ್ರಕರಣ ಭೇದಿಸಲು ಐವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಐದು ಪ್ರತ್ಯೇಕ ತಂಡ ರಚಿಸಲಾಗಿದೆ. ಜಿಲ್ಲೆಯ 18 ಕಡೆ ನಾಕಾಬಂದಿ ಹಾಕಿ ತಪಾಸಣೆ ಮಾಡಲಾಗುತ್ತಿದೆ. ದರೋಡೆ ಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಹೇಗಾಯ್ತು?: ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿ ಘಟನೆ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ 5 ಮಂದಿ ಗನ್ ತೋರಿಸಿದ್ದಾರೆ. ಐವರ ಪೈಕಿ ನಾಲ್ವರು ಮುಸುಕು ಧರಿಸಿದ್ದರು.
ಓರ್ವ ಗ್ಯಾಂಗ್ ಲೀಡರ್ ಎರಡು ಕೈ ಗಳಲ್ಲೂ ಗನ್ ಹಿಡಿದು ಸಿನಮೀಯ ಶೈಲಿಯಲ್ಲಿ ಬೆದರಿಕೆ ಹಾಕಿದ್ದಾನೆ. ನಂತರದ ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಎರಡು ಬೈಕ್ ಗಳಲ್ಲಿ ಬಂದ ಗ್ಯಾಂಗ್ ಕೈಚಳಕ ತೋರಿಸಿದೆ. ದರೋಡೆಕೋರರನ್ನು ಸಿಬ್ಬಂದಿ ಹಿಂಬಾಲಿಸಿದ್ದಾರೆ. ಆದರೆ ದುಷ್ಕರ್ಮಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ರಾಬರಿ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ. (AI ಚಿತ್ರ ಬಳಸಲಾಗಿದೆ)