ನವದೆಹಲಿ; ಉನ್ನಾವೋ ಅತ್ಯಾಚಾರಿಗೆ ನೀಡಿದ್ದ ಜಾಮೀನಿಗೆ ತಡೆ ಹಾಗೂ ಅರಾವಳಿ ಮತ್ತು ಶ್ರೇಣಿಗಳ ವ್ಯಾಖ್ಯಾಯನದ ಕುರಿತಂತೆ ಸುಪ್ರೀಂಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.
ಅರಾವಳಿ ಮತ್ತು ಶ್ರೇಣಿಗಳ ವ್ಯಾಖ್ಯಾಯನ
ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಡೆ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ರಜಾ ಪೀಠವು, ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿತು.
ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟಿಕರಣದ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.
ಅತ್ಯಾಚಾರ ಆರೋಪಿ ಜಾಮೀನಿಗೆ ತಡೆ
ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸೆಂಗಾರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಡೆ ನೀಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ವಕೀಲರಾದ ಅಂಜಲಿ ಪಟೇಲ್, ಪೂಜಾ ಶಿಲ್ಪಕರ್ ಅವರು ಮೇಲ್ಮನವಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ, ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಸೆಂಗಾರ್‌ಗೆ ನೋಟಿಸ್ ನೀಡಿದೆ.
2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ವಿಚಾರಣಾ ನ್ಯಾಯಾಲಯವು 2019ರಲ್ಲಿ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಉನ್ನಾವೋ ಅತ್ಯಾಚಾರಿಗೆ ನೀಡಿದ್ದ ಜಾಮೀನು ಹಾಗೂ ಅರಾವಳಿ ಮತ್ತು ಶ್ರೇಣಿಗಳ ವ್ಯಾಖ್ಯಾಯನ ಕುರಿತು ರಾಷ್ಟ್ರ ಮಟ್ಟದಲ್ಲಿ ತೀವ್ರ ಪ್ರತಿಭಟನೆ ನಡೆದು, ವ್ಯಾಪಕ ಚರ್ಚಗೆ ಕಾರಣವಾಗಿದ್ದು, ಕೇಂದ್ರ ಮೋದಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.