ಬೆಂಗಳೂರು: ಪ್ರಸಿದ್ಧ ಲಕ್ಕಿ ಭಾಸ್ಕರ್ ಸಿನಿಮಾ (Lucky Bhaskar) ಶೈಲಿಯಲ್ಲಿ ಬೇಲಿಯೇ ಎದ್ದು ಹೊಲಮೇಯ್ದಂತೆ ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್ ಒಬ್ಬರು ತಮ್ಮ ಗ್ರಾಹಕರನ್ನು ನಂಬಿಸಿ ಅವರ ಹೆಸರಿನಲ್ಲಿ ಮೂರು ಕೋಟಿ ರುಪಾಯಿಗೂ ಹೆಚ್ಚಿನ ಮೊತ್ತದ ಚಿನ್ನಾಭರಣ ಅಡಮಾನ ಸಾಲ ಪಡೆದು, ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಲ್ಲೇಶ್ವರದ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಲಕ್ಕಿ ಬಾಸ್ಕರ್ ಸಿನಿಮಾ ಶೈಲಿಯಲ್ಲಿ ಬಾರಿ ವಂಚನೆಯಾಗಿರುವುದು ವರದಿಯಾಗಿದೆ.
ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಕೋಟ್ಯಂತರ ರುಪಾಯಿಗಳೊಂದಿಗೆ ನಾಪತ್ತೆಯಾಗಿದ್ದಾರೆ.
ಚಿನ್ನವನ್ನೇ ಇಡದ 41 ಖಾತೆಗಳಿಂದ ಒಟ್ಟು 3,11,54,000 ಸಾಲ ಪಡೆದಿರುವುದು ಪತ್ತೆ ಯಾಗಿದೆ. ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ಎನ್.ರಘು ತಮ ಬ್ಯಾಂಕಿನ ಗ್ರಾಹಕರಗಳನ್ನ ನಂಬಿಸಿ ಅವರಿಂದ ಖಾಲಿ ಚಿಕ್ಕುಗಳು ಮತ್ತು ಒಟಿಪಿಗಳನ್ನು ಪಡೆದು ಚಿನ್ನದ ಸಾಲ ಪಡೆದಿದ್ದಾರೆ.
ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲ ದಿನಗಳ ಹಿಂದೆ ಗೃಹ ಸಾಲ ಮಂಜೂರಾಗಿತ್ತು. ಅದೇ ವಿಶ್ವಾಸದ ಮೇಲೆ ಬ್ಯಾಂಕ್ ಮ್ಯಾನೇಜರ್ ರಘು ತಮ್ಮ ತಂದೆಗೆ ಹುಷಾರಿಲ್ಲ ಎಂದು ಹೇಳಿ ಮೂರು ಲಕ್ಷ ರೂ. ಖಾಸಗಿ ಸಾಲ ಪಡೆದುಕೊಂಡಿದ್ದರು. ಅದರಲ್ಲಿ 1.30 ಲಕ್ಷ ರುಪಾಯಿ ವಾಪಸ್ ನೀಡಿದ್ದಾರೆ. 1.70 ಲಕ್ಷಗಳನ್ನು ಕೊಡುವುದಾಗಿ ಹೇಳುತ್ತಲೇ ಕಾಲ ಹರಣ ಮಾಡಿದ್ದಾರೆ.
ಈ ನಡುವೆ ಗ್ರಾಹಕರ ಬಳಿ ಬಂದ ರಘು, ತಮಗೆ ಹಣದ ಅವಶ್ಯಕತೆ ಹೆಚ್ಚಿದೆ. ನನ್ನ ತಾಯಿಯ ಚಿನ್ನವನ್ನು ನಿಮ್ಮ ಖಾತೆಯಲ್ಲಿ ಇಟ್ಟು ಚಿನ್ನದ ಸಾಲ ಪಡೆದುಕೊಳ್ಳುತ್ತೇನೆ. ಆ ಸಾಲವನ್ನು ನಾನೇ ತೀರಿಸಿಕೊಳ್ಳುತ್ತೆನೆ. ಸಾಲ ಪಡೆಯಲು ಬ್ಯಾಂಕ್ ನಿಯಮಗಳ ಪ್ರಕಾರ ಖಾಲಿ ಚೆಕ್ ಮತ್ತು ಮೊಬೈಲ್ ನಂಬರ್‌ಗೆ ಬರುವ ಒಟಿಪಿ ನೀಡುವಂತೆ ಮನವೊಲಿಸಿದ್ದಾರೆ.
ನಿಮ್ಮದೇ ಖಾತೆಯಲ್ಲಿ ನೀವು ಚಿನ್ನ ಅಡಮಾನ ಮಾಡಿ ಸಾಲ ಪಡೆಯಬಹುದಲ್ಲ ಎಂದು ಗ್ರಾಹಕರು ಹೇಳಿದಾಗ. ನಾವು ಬ್ಯಾಂಕ್ ಅಧಿಕಾರಿಗಳಾಗಿರುವುದರಿಂದ ನಮ್ಮದೇ ಬ್ಯಾಂಕಿನಲ್ಲಿ ಆ ರೀತಿ ವ್ಯವಹಾರ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರಂತೆ, ಇದನ್ನು ನಂಬಿದ ಗ್ರಾಹಕರು ಸಹಾಯ ಮಾಡಿದ್ದಾರೆ.
ಗೃಹ ಸಾಲ ಪಡೆಯಲು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಚಿನ್ನದ ಸಾಲಕ್ಕೆ ಸಹಾಯ ಮಾಡಿದ್ದಾರೆ. ನೋಂದ ವ್ಯಕ್ತಿ ತಮ್ಮ ಖಾಲಿ ಚೆಕ್ ಮತ್ತು ಮತ್ತು ತಾಯಿಯ ಮೊಬೈಲ್ ಗೆ ಬಂದ ಒಟಿಪಿಯನ್ನು ವ್ಯವಸ್ಥಾಪಕರಿಗೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ರಘು ಅವರು ಒಬ್ಬರ ಖಾತೆಯಿಂದಲೇ 32 ಲಕ್ಷ ರೂ. ಚಿನ್ನದ ಸಾಲ ಪಡೆದುಕೊಂಡಿದ್ದಾರೆ.
ಬ್ಯಾಂಕಿನಲ್ಲಿ ಲೆಕ್ಕಪರಿಶೋಧನೆ ಮಾಡಿದ ವೇಳೆಯಲ್ಲಿ ಕಳೆದ ಅಕ್ಟೋಬರ್ 4 ರಿಂದ ಡಿಸೆಂಬರ್ 9 ರವರೆಗೆ ಈ ರೀತಿ 3.11 ಕೋಟಿ ರುಪಾಯಿ ವಂಚನೆ ಆಗಿರಬಹುದು ಪತ್ತೆಯಾಗಿದೆ. ಈ ಬಗ್ಗೆ ಎನ್ ರಘು ಅವರನ್ನು ಡಿಸೆಂಬರ್ 10 ರಂದು ವಿಚಾರಿಸಿದಾಗ ಅವರು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.
ಆದರೆ ಮಾರನೇ ದಿನ ಯಾವುದೇ ಮಾಹಿತಿ ನೀಡದೆ ಬ್ಯಾಂಕ್ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಕೆನರಾ ಬ್ಯಾಂಕಿನ ಕೇಂದ್ರ ಕಚೇರಿಯ ಹಿರಿಯ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.