ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ (Hundi) ಎಣಿಕೆ ಕಾರ್ಯ ನೆರವೇರಿದ್ದು, ಕಳೆದ 20 ದಿನದಲ್ಲಿ 3.73 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದೆ.
ಕಳೆದ 20 ದಿನದಲ್ಲಿ 3,73,66,587 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ ಸಂಗ್ರಹವಾದ ಕಾಣಿಕೆಯಲ್ಲಿ 3,62,69,247 ರೂ. ನೋಟುಗಳು ಹಾಗೂ 10,97,340 ರೂ. ನಾಣ್ಯಗಳು ಸಂಗ್ರಹವಾಗಿವೆ.
ಇದರ ಜೊತೆಗೆ 87 ಗ್ರಾಂ ಚಿನ್ನ, 910 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
ಮಂತ್ರಾಲಯದ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಈ ವೇಳೆ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗಿಯಾಗಿದ್ದರು.