ಬೆಂ.ಗ್ರಾ.ಜಿಲ್ಲೆ: ನಾಳೆಯ ಹೊಸ ವರ್ಷದ ಆಚರಣೆ (New Year Celebration) ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆಯಿಂದ ( 108 Ambulance Service) ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಡಿ.31 ಹಾಗೂ ಜನವರಿ 1ರಂದು ಆಂಬ್ಯುಲೆನ್ಸ್ ಸಿಬ್ಬಂದಿಗಳ ರಜೆಗಳನ್ನು ರದ್ದುಗೊಳಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಸೇವೆ ಹೆಚ್ಚಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ 16 ಆಂಬ್ಯುಲೆನ್ಸಳನ್ನು ಮುಂಚಿತವಾಗಿ ನಿಯೋಜಿಸಲಾಗಿದೆ.
ಎಲ್ಲಾ ಆಂಬ್ಯುಲೆನ್ಸ್ ಗಳಲ್ಲಿ ಇಂಧನವನ್ನು ಸಂಪೂರ್ಣವಾಗಿ ತುಂಬಲಾಗಿದ್ದು, ಆಕ್ಸಿಜನ್ ಸಿಲಿಂಡರ್‌ಗಳು ಹಾಗೂ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಮತ್ತು ಉಪಕರಣಗಳು ಔಷಧಿಗಳನ್ನು ಸಿದ್ಧವಾಗಿರಿಸಲಾಗಿದೆ.
ಸಾಮಾನ್ಯವಾಗಿ ಹೊಸ ವರ್ಷದ ಸಮಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುವುದನ್ನು ಗಮನಿಸಿ, ಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಹಾಗೂ ತುರ್ತು ಸಂದರ್ಭಗಳಿಗೆ ತ್ವರಿತವಾಗಿ ಸ್ಪಂದಿಸಲು ಈ ಮುನ್ನೆ ಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು 108 ಆರೋಗ್ಯ ಕವಚ ಅಧಿಕಾರಿಗಳು ತಿಳಿಸಿದ್ದಾರೆ.