ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ (Doddaballapur): ಅಪಘಾತ ಹೆಚ್ಚಳ, ವನ್ಯಜೀವಿಗಳ ಹಾವಳಿ, ಬಿಬಿಎಂಪಿ ಕಸದ ಆತಂಕ, ತಪ್ಪದ ತ್ಯಾಜ್ಯ ನೀರಿನ ಆತಂಕದ ನಡುವೆಯೇ 2025ನೇ ವರ್ಷ ಮುಗಿದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದುಹೋಗಿರುವ ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿ ಹಾಗೂ ದಾಬಸ್‌ಪೇಟೆ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಗಳು ಟೋಲ್ ಸಂಗ್ರಹ ಮಾಡುತ್ತಿವೆ. ಆದರೆ ಈ ರಸ್ತೆಗಳು ಪ್ರಯಾಣಿಕರ ಪಾಲಿನ ಮೃತ್ಯುಕೂಪವಾಗಿ ಪರಿಣಿಸಿವೆ ಎಂಬ ಆರೋಪ ವ್ಯಾಪಕವಾಗಿದೆ.
ಒಂದೇ ಅಪಘಾತದಲ್ಲಿ 5 ಜನ ಮೃತಪಟ್ಟರೆ ಬಸ್, ಬೈಕ್, ಕಾರು, ರಸ್ತೆ ಬದಿಯಲ್ಲಿ ನಿಂತಿರುವ ಲಾರಿಗಳಿಗೆ ಡಿಕ್ಕಿ ಹೊಡೆದು ಮೃತಪಡುತ್ತಿರುವ ಸಂಖ್ಯೆಯಂತು ಹೆಚ್ಚುತ್ತಲೇ ಇದೆ. ಆದರೆ ಟೋಲ್ ಸಂಗ್ರಹ ಮಾಡುವವರು ಮಾತ್ರ ಅಪಘಾತಗಳ ತಡೆಗೆ ತಲೆಕೆಡಿಸಿಕೊಂಡಿಲ್ಲ ಎಂಬ ಆಕ್ರೋಶ ಪ್ರಯಾಣಿಕರದ್ದು.
ಗಣೇಶ ವಿಸರ್ಜನೆ ವೇಳೆ ದುರ್ಘಟನೆ
ಗಣೇಶ ಹಬ್ಬದ ವೇಳೆ ಅನೇಕ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಪಟಾಕಿ ಸ್ಪೋಟದಲ್ಲಿ ಮೂವರ ಸಾವು ಜನರನ್ನು ಹೆಚ್ಚು ಕಾಡಿದ ಕಹಿ ಘಟನೆಯಾಗಿದೆ.
ಬಿಬಿಎಂಪಿ ಕಸದ ತೂಗುಕತ್ತಿ
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಗೇರನಹಳ್ಳಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ಬರುವುದು ನಿಂತಿಲ್ಲ. ಈ ನಡುವೆ ಮತ್ತೆ ಗುಂಡ್ಲಹಳ್ಳಿ ಸಮೀಪ ಬಿಬಿಎಪಿಎಂ ವ್ಯಾಪ್ತಿಗೆ ಕಸ ಬರುವ ಆತಂಕ ಎದುರಾಗಿರುವುದು ಶಾಸಕ ಧೀರಜ್ ಮುನಿರಾಜು ಅವರು ಸದನದಲ್ಲಿ ಪ್ರಶ್ನಿಸಿದ್ದಾರೆ.
ಕೆರೆಗಳಿಗೆ ನಿಲ್ಲದ ಒಳಚರಂಡಿ ನೀರು
ಮಜರಾಹೊಸಹಳ್ಳಿ, ದೊಡ್ಡತುಮಕೂರು ವ್ಯಾಪ್ತಿಯ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿಯಿಂದ ಒಳಚರಂಡಿ ನೀರು ಹರಿಯುವುದು నింತಿల్ల.
ನೇಕಾರ ಸಮಸ್ಯೆ
ದೊಡ್ಡಬಳ್ಳಾಪುರ ನಗರದ ಜೀವನಾಡಿ ಉದ್ಯಮವಾಗಿರುವ ನೇಕಾರಿಕೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಆದರೆ ಸೂಕ್ತ ಪರಿಹಾರ ಇನ್ನೂ ದೊರೆತಿಲ್ಲ.
ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ರೂ.100 ಕೋಟಿ ವೆಚ್ಚದಲ್ಲಿ ನಿರ್ಮಾಣವಾ ಗಿರುವ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಿ 5 ವರ್ಷ ಕಳೆಯುತ್ತ ಬಂದಿದ್ದರು ಕಾರ್ಯಾರಂಭ ಮಾಡಿಲ್ಲ. ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆಯಾಗಿದ್ದು ಬಿಟ್ಟರೆ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗೆ ಹತ್ತಾರು ಸಮಸ್ಯೆಗಳು 2026ಕ್ಕೂ ಮುಂದುರಿಯುತ್ತವೆ.
ಚೆನ್ನಾಗಿದ್ದ ರಸ್ತೆಗೆ ವೈಟ್ ಟ್ಯಾಪಿಂಗ್..?
ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗೆ ರೂ.14 ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಯಾವ ಕಾರಣಕ್ಕೆ ಎಂಬ ಪ್ರಶ್ನೆ ಕೇಳಿ ಬಂತು. ಅಲ್ಲದೆ ಕಾಮಗಾರಿ ವಿವರ ನೀಡಲು ಸಂಬಂಧಿಸಿದ ಇಂಜಿನಿಯರ್ ಕೈಗೆ ಸಿಗುತ್ತಿಲ್ಲ ಮಾತುಗಳು ಹರಿದಾಡಿದವು.
10% ಕಮಿಷನ್ಗೆ ಕಾಮಗಾರಿ ಮಾರಾಟ..?
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಶೇ.10 ಕಮಿಷನ್ ಗೆ ಮಾರಾಟ ಆಗಿವೆ ಎಂಬ ಆರೋಪ ವ್ಯಾಪಕವಾಗಿದೆ.
ಅದರಲ್ಲಿಯೂ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರ ಬೆಂಬಲಿಗರು ಎಂಬಂತಿರುವವರಿಗೆ ದೊರೆತಿವೆ ಎನ್ನಲಾಗುತ್ತಿರುವ ಕಾಮಗಾರಿಗಳು, ಶೇ.10 ಗೆ ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರ ಪಾಲಾಗಿದೆ ಎಂಬ ಆರೋಪದ ಕುರಿತಂತೆ ಬಿಜೆಪಿ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ರಾಜಕೀಯ ಮೇಲಾಟ..!
ದೊಡ್ಡಬಳ್ಳಾಪುರ ಕ್ಷೇತ್ರದ ರಾಜಕೀಯದ ಮಟ್ಟಿಗೆ ಪಿಎಲ್‌ಡಿ ಬ್ಯಾಂಕ್, ಬಮೂಲ್, ಟಿಎಪಿಎಂಸಿಎಸ್ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗಳು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು.
ಬಮೂಲ್ ಚುನಾವಣೆ
ಬಮೂಲ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಗಿಂತಲು ಅಭ್ಯರ್ಥಿಗಳ ಸ್ವಂತ ವರ್ಚಸ್ಸು ಮೇಲುಗೈ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಯಾದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಬಿಸಿ ಆನಂದ್ ಕುಮಾರ್ ಅವರ ಗೆಲುವು ಸ್ವಂತ ವರ್ಚಿಸಿನ ಗೆಲುವಾಗಿತ್ತು.
TAPMCS ಚುನಾವಣೆ ಫಲಿತಾಂಶ
ಟಿಎಪಿಎಂಸಿಎಸ್ ಕಾಂಗ್ರೆಸ್ ಪಾಲಾಗುವ ಮೂಲಕ ಶಾಸಕ ಧೀರಜ್ ಮುನಿರಾಜು ಅವರಿಗೆ ಮುಜುಗರ ತಂದರೆ. ಪಿಎಲ್‌ಡಿ ಬ್ಯಾಂಕ್ ಬಿಜೆಪಿ, ಜೆಡಿಎಸ್ ಮೈತ್ರಿಗೆ ಜಯವಾಗಿ ಮೈತ್ರಿಗೆ ಮನ್ನಣೆ ನೀಡಿತ್ತು.
ಶಾಸಕ ಧೀರಜ್ ಮುನಿರಾಜು ತಂತ್ರಕ್ಕೆ ಗೆಲುವು
ಇತ್ತೀಚೆಗೆ ನಡೆದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ರಾಜ್ಯ ಮಟ್ಟದಲ್ಲಿ ಬಾಶೆಟ್ಟಿಹಳ್ಳಿ ಚುನಾವಣೆ ಫಲಿತಾಂಶ ಶಾಸಕ ಧೀರಜ್ ಮುನಿರಾಜು ಅವರ ಕೀರ್ತಿ ಹರಡಿದೆ.
ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿಗಳಿಗೆ ಅನೇಕ ಆತಂಕ ಎದುರಾದರೂ, ಶಾಸಕ ಧೀರಜ್ ಮುನಿರಾಜು ಅವರ ತಂತ್ರಗಾರಿಕೆಯ ಕಾರಣ ಮೊದಲ ಬಾರಿಗೆ ಮೇಲ್ದರ್ಜೆಗೇರಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಬಿಜೆಪಿ ಪಾಲಾಗಿದೆ.
ಆತಂಕ
ಈ ಚುನಾವಣೆ ಬಳಿಕ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ಯೋಚಿಸಿಬೇಕಾಗಿದೆ ಎಂಬುದು ಚರ್ಚಿತ ವಿಚಾರ.
2026 ಪ್ರಶಸ್ತಿಗಳ ವರ್ಷ
ಈ ವರ್ಷ ದೊಡ್ಡಬಳ್ಳಾಪುರ ತಾಲ್ಲೂಕಿನ ಮಟ್ಟಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಆರ್.ನಾರಾಯಣಸ್ವಾಮಿ ಪಡೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವೀಣೆ ತಯಾರಕ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರಿಗೆ ಲಭಿಸಿದೆ.
ಹರಿತಲೇಖನಿ ಮುಖ್ಯ ಸಂಪಾದಕ ಕೆ.ಎಂ.ಸಂತೋಷ್ ಅವರಿಗೆ ರಾಜ್ಯ ಮಟ್ಟದ ಛಾಯ ರತ್ನ ಪ್ರಶಸ್ತಿ, ಶ್ರವಣೂರು ಗ್ರಾಮದ ಜೇನು ಕೃಷಿಕ ಮಹೇಶ್ ಅವರಿಗೆ ಅತ್ಯುತ್ತಮ ಯುವ ಜೇನು ಸಾಕಾಣಿಕೆದಾರ ಪ್ರಶಸ್ತಿ, ಶಿಕ್ಷಕ ಸಿ.ವಿ.ಲೋಕೇಶ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ‘ಕೆ. ರಾಮಚಂದ್ರಯ್ಯ ದತ್ತಿ’ ಪುರಸ್ಕಾರ, ತೂಬಗೆರೆ ಸಮೀಪ ನಾರಸಿಂಹನಳ್ಳಿಯ ರೈತ ಶ್ರೀಕಾಂತ್ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಸೋಬಾನೆ ಹಾಡುಗಳ ಗಾಯಕಿ ಓಬವ್ವ ಅವರಿಗೆ ಜಾನಪದ ಅಕಾಡಮಿ ಪ್ರಶಸ್ತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ 25 ವರ್ಷಗಳ ನೆನಪಿನಲ್ಲಿ ವೈ.ಟಿ.ಲೋಹಿತ್, ಅರ್ಜುನ್ ಅವರಿಗೆ ಇಂದಿಗಾಂಧಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಕೇಂದ್ರ, ರಾಜ್ಯ ಸರ್ಕಾರದ ಪ್ರಶಸ್ತಿಗಳು ದೊರಕಿವೆ.
ಗಣ್ಯರ ನಿಧನ
ಜೆಡಿಎಸ್ ಮುಖಂಡ ಎಚ್.ಅಪ್ಪಯ್ಯಣ್ಣ, ಸ್ವಾತಂತ್ರ್ಯ ಹೋರಾಟಗಾರ ಕೆ.ಸಿ.ನಾರಾಯಣಪ್ಪ, ಖ್ಯಾತ ವಾಣಿಜ್ಯೋದ್ಯಮಿ ಹುಂಗಿ ಎಚ್. ಪಿ.ಶಂಕರ್, ಜಿಂಕೆಬಚ್ಚಹಳ್ಳಿ ಗ್ರಾಮದ ನಿವೃತ್ತ ಎಸ್ಸಿಪಿ ಹಾಗೂ ಬಾಶೆಟ್ಟಿಹಳ್ಳಿ ವಿಎಸ್‌ಎಸ್‌ಎನ್‌ನ ಮಾಜಿ ನಿರ್ದೇಶಕ ಬಿ.ಸಿ.ಕನಕಕುಮಾರ, ನಗರದ ಶ್ರೀ ಚಾಮುಂಡೇಶ್ವರಿ ಡೆವಲಪ್ಪರ್ಸ್ ಮಾಲೀಕ ಎನ್.ಗಂಗಾಧರಯ್ಯ, ಹಿರಿಯ ರಂಗಭೂಮಿ ಕಲಾವಿದ ಜವಾಜಿ ಸೀತಾರಂ, ಕಂಟನಕುಂಟೆ ಸಮೀಪದ ಟಿಪ್ಪುನಗರದಲ್ಲಿನ ಖಾನಖಾಯೇ ಸೂಫಿ ಔಲಿಯಾದ್ ಪಿರೇ ಮುರಶಿದ್ ಹಾಜ್ರತ್ ಸೂಫಿ ಇಮ್ಮಿಯಾಜ್ ಹುಸೈನ್ ಚಿಸ್ತಿ, ನಾಮಫಲಕ ಕಲಾವಿದ ಸೂರ್ಯಕುಮಾರ್, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ವೀಣೆ ತಯಾರಕ ಪೆನ್ನೋಬಳಯ್ಯ
ಅಲ್ಲದೆ ದೊಡ್ಡಬಳ್ಳಾಪುರ ನಗರದ 21ನೇ ವಾರ್ಡ್ ಹೇಮಾವತಿ ಪ್ರಶಸ್ತಿ ಪೇಟೆ ನಗರಸಭಾ ಸದಸ್ಯ ಎಸ್.ಎ.ಭಾಸ್ಕರ್ ಅವರು ನಿಧನರಾದರು.