ದೊಡ್ಡಬಳ್ಳಾಪುರ: ಮಧ್ಯವರ್ತಿಗಳಿಂದ, ಭೂ ಮಾಲೀಕರಿಗೆ ಅಥವಾ ಬೇರೆ ರೀತಿಯ ಯಾವುದೇ ವ್ಯವಹಾರಸ್ಥರಿಗೂ ವಂಚನೆಯಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಡಿಜಿಟಲ್ ಇ-ಸ್ಟ್ಯಾಂಪ್ ( Digital E-stamps) ಜಾರಿಗೆ ತಂದಿದೆ ಎಂದು ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಡಾ.ಬಿ.ಆರ್.ಅನುಪಮ (Dr. B.R. Anupama) ಹೇಳಿದರು.
ಅವರು ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆ ಕುರಿತು ಪತ್ರಬರಹಗಾರರು, ಸಹಕಾರಿ ಬ್ಯಾಂಕ್, ವಕೀಲರು ಹಾಗೂ ಸಾರ್ವಜನಿಕರಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯು ನಾಗರಿಕರಿಗೆ ಸುಧಾರಿತ ಪಾರದರ್ಶಕತೆ, ಅನುಕೂಲತೆ, ದಕ್ಷತೆಯೊಂದಿಗೆ ಆನ್ಲೈನ್ನಲ್ಲಿ ಇ-ಸ್ಟ್ಯಾಂಪ್ಗಳನ್ನು ಪಡೆಯಬಹುದಾಗಿದೆ. ತಪ್ಪಾದ ಶುಲ್ಕ ಲೆಕ್ಕಾಚಾರ, ಸಹಿಗಾಗಿ ಮಧ್ಯವರ್ತಿಗಳ ಮೇಲಿನ ಅವಲಂಬನೆ, ಭೌತಿಕ ಸ್ಟಾಂಪ್ ಪೇಪರ್ಗಳ ನಷ್ಟ ಅಥವಾ ಹಾನಿ ತಪ್ಪಲಿದೆ. ಹಿಂದಿನ ದಿನಾಂಕದ ಸ್ಟ್ಯಾಂಪ್ ಪೇಪರ್ಗಳನ್ನು ಬಳಸಿಕೊಂಡು ಭೂ ಮಾಲೀಕರು ಸೇರಿದಂತೆ ಇತರರಿಗು ವಂಚನೆಯಾಗುವುದು ತಪ್ಪಲಿದೆ.
ಡಿಜಿಟಲ್ ಇ-ಸ್ಟ್ಯಾಂಪ್ನ ಪ್ರಮುಖ ಲಕ್ಷಣಗಳೆಂದರೆ ಇ-ಸ್ಟ್ಯಾಂಪ್ಗಳನ್ನು ಆನ್ಲೈನ್ನಲ್ಲಿ ಯಾವುದೇ ಸಮಯದಲ್ಲಾದರು ಪಡೆಯಬಹುದು. ಸ್ವಾಂಪ್ ಶುಲ್ಕವು ಸ್ವಯಂಚಾಲಿತವಾಗಿ ಲೆಕ್ಕಹಾಕಲಿದೆ. ಈ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬಹುದು. ಡಿಜಿಟಲ್ ಪತ್ರವನ್ನು ಶಾಶ್ವತವಾಗಿ ಸಂಗ್ರಹಣೆ ಮಾಡಿಟ್ಟುಕೊಳ್ಳಬಹುದು.
ಇ-ಸ್ಟ್ಯಾಂಪ್ ಪತ್ರವು ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಮೂಲಕವೇ ನಡೆಯುತ್ತದೆ. ಇ-ಸ್ಟ್ಯಾಂಪ್ ಪರಿಸರ ಸ್ನೇಹಿ ಮತ್ತು ವೆಚ್ಚ ಪರಿಣಾಮಕಾರಿ ಪರಿಹಾರವಾಗಿದೆ ಎಂದರು.
ತರಬೇತಿಯಲ್ಲಿ ಹಿರಿಯ ಉಪನೋಂದಣಾಧಿಕಾರಿ ಘನಿಉಲ್ಲಾಖಾನ್, ಪತ್ರಬರಹಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹನುಮಂತಯ್ಯ, ಉಪಾಧ್ಯಕ್ಷ ಎಸ್.ಜಯಣ್ಣ, ಕಾರ್ಯದರ್ಶಿ ಎನ್.ತಿರುಮಲೇಶ್, ಸಲಹೆಗಾರ ಕೆ.ಬಿ.ನಾಗರಾಜ್, ಖಜಾಂಚಿ ಕೆ.ವಿ.ಶ್ರೀನಿವಾಸ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.