ದೊಡ್ಡಬಳ್ಳಾಪುರ: ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ತುಂತುರು ಮಳೆಯಾಗಿದೆ (Drizzle).

ಅಲ್ಲದೆ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಒಳನಾಡಿನ ಕೆಲವು ಭಾಗಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಮೂರರಿಂದ ಆರು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಿದ್ದರೆ, ಇನ್ನು ಕೆಲ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣವಿರಲಿದೆ.
ಕಳೆದ 24 ಗಂಟೆಗಳಲ್ಲಿ ವಿಜಯಪುರದಲ್ಲಿ ಶೀತಗಾಳಿ ವಾತಾವರಣ ಕಂಡು ಬಂದಿದೆ. ಭಾರತ ಹವಾಮಾನ ಇಲಾಖೆಯ ಪ್ರಕಾರ, ಶೀತಗಾಳಿ ಪಶ್ಚಿಮ ವಾಯುವ್ಯ ದಿಕ್ಕಿಗೆ ಸಾಗಿದ್ದು, ಉತ್ತರ ಶ್ರೀಲಂಕಾ ಕರಾವಳಿಯತ್ತ ಚಲಿಸಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾನುವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.