ದೊಡ್ಡಬಳ್ಳಾಪುರ: ಸ್ವಾಮಿ ವಿವೇಕಾನಂದರ (Swami Vivekananda) 163ನೇ ಜಯಂತಿಯನ್ನು ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯಲ್ಲಿ (Nalanda High School) ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಅನೇಕ ವಿದ್ಯಾರ್ಥಿಗಳು ವಿವೇಕಾನಂದರಂತೆ ವೇಶಭೂಷಣವನ್ನು ತೊಟ್ಟು ಗಮನ ಸೆಳೆದರು.

ಈ ವೇಳೆ ವಿವೇಕಾನಂದರ ವೀರಗೀತೆಗಳನ್ನು ಅನೇಕ ವಿದ್ಯಾರ್ಥಿಗಳು ಹಾಡಿದರು. ಅಲ್ಲದೆ ಸ್ವಾಮಿ ವಿವೇಕಾನಂದರ ವಾಣಿಗಳ ಮೂಲಕ ರೂಪಕವನ್ನು ಪ್ರದರ್ಶಿಸಲಾಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು, “ಸ್ವಾಮಿ ವಿವೇಕಾನಂದರು ಭಾರತದ ಮಹಾನ್ ಸಂತ, ತತ್ವಜ್ಞಾನಿ ಮತ್ತು ಯುವಜನರ ಸ್ಪೂರ್ತಿಯ ನಾಯಕರಾಗಿದ್ದರು. ಅವರ ಚಿಂತನೆಗಳು ಎಲ್ಲಾ ವರ್ಗ, ಜಾತಿ, ಧರ್ಮದ ಜನರಿಗೆ ಸದಾ ಪ್ರೇರಣೆ ನೀಡುತ್ತವೆ. ಯುವ ಜನತೆಯ ಸ್ಪೂರ್ತಿಯ ಚಿಲುಮೆಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಅವರ ಮಾತುಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ. ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ. ನಿಮ್ಮನ್ನು ನೀವು ದುರ್ಬಲ ಎಂದು ಭಾವಿಸುವುದೇ ದೊಡ್ಡ ಪಾಪ.
ಸದಾ ನಿರ್ಭಯರಾಗಿರಿ, ಶಕ್ತಿಯೇ ಜೀವನ, ಬಲಹೀನತೆಯೇ ಮರಣ (Strength is life, Weakness is death) ಈ ರೀತಿಯ ಸ್ವಾಮಿ ವಿವೇಕಾನಂದರ ಸ್ಪೂರ್ತಿಯ ವಾಣಿಗಳು ಸಮಾಜದ ಉದ್ದಾರಕ್ಕೆ ಮತ್ತು ಯುವಜನರ ಏಳಿಗೆಗೆ ಕಾರಣವಾಗಿದೆ. ಇವರ ಈ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದು.

ಯುವ ಜನತೆಯಲ್ಲಿ ಆತ್ಮ ವಿಶ್ವಾಸ, ಧೈರ್ಯ ಮತ್ತು ಮಾನವ ಸೇವೆಯ ಬಗ್ಗೆ ಸದಾ ಹೇಳುತ್ತಿದ್ದರು. ಯುವ ಜನತೆಯು ಶಕ್ತಿಶಾಲಿಗಳಾಗಿ ಧೈರ್ಯವಂತರಾಗಬೇಕು ಮತ್ತು ದೇಶದ ಭವಿಷ್ಯ ನಿರ್ಮಾತೃಗಳಾಗಬೇಕು ಎಂಬುದು ಅವರ ಆಶಯವಾಗಿತ್ತು.
ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಜಗತ್ತಿನಾದ್ಯಂತ ಶಿಕ್ಷಣ, ಸೇವೆ ಮತ್ತು ಆಧ್ಯಾತ್ಮದ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸುನೀತಾ ಪಿ ಮತ್ತು ಅನಿತಾ ಕೆಪಿ, ಲಕ್ಷ್ಮಿ ಎಂವಿ, ಭಾರತಿ ಎನ್ ಮುಂತಾದ ಶಿಕ್ಷಕ ಸಮೂಹ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸಭೆಯ ನಂತರ ಸ್ವಾಮಿ ವಿವೇಕಾನಂದರ ಪ್ರತಿಕೃತಿಗಳು, ವಾಣಿಗಳು ಹಾಗೂ ಉತ್ತಿಷ್ಠತಾ ಜಾಗೃತ ಗೀತೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
