ಮೈಸೂರು: ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ತನ್ನ ಪಾಲಿನ ಅನುದಾನ ನೀಡಬೇಕಲ್ಲ ಎಂಬ ಚಿಂತೆ ಕಾಂಗ್ರೆಸ್ ಸರ್ಕಾರಕ್ಕೆ ಕಾಡುತ್ತಿದೆ. ಆದ್ದರಿಂದಲೇ ಈ ಯೋಜನೆಯನ್ನು ವಿರೋಧ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R.Ashoka) ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 18 ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಾದ ದೋಷಗಳನ್ನು ಸರಿ ಮಾಡಲು ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿ ಮಾಡಿದೆ.
ವಿಕಸಿತ ಭಾರತ ಎಂಬುದು ಇದರ ಹೆಸರಾಗಿದ್ದು, ಈ ಹೆಸರಿನ ಬಗ್ಗೆ ಕಾಂಗ್ರೆಸ್ ಆಕ್ಷೇಪ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ಪಾರದರ್ಶಕವಾಗಿ ಉದ್ಯೋಗ ಖಾತರಿ ನೀಡಲು ಈ ಯೋಜನೆ ತರಲಾಗಿದೆ. ಆದರೆ ತಾವು ನಿರುದ್ಯೋಗಿಗಳಾಗುತ್ತೇವೆ ಎಂಬ ಭಯ ಕಾಂಗ್ರೆಸ್ಸಿಗರಿಗಿದೆ. ವೋಟ್ ಚೋರಿ ಎಂದು ಹೇಳುವ ಇವರು ಕೂಲಿ ಚೋರಿ ಮಾಡುತ್ತಿದ್ದರು. ಜೆಸಿಬಿ ಮೊದಲಾದ ಯಂತ್ರ ಬಳಸಿ ಕೆಲಸ ಮಾಡಿಸುತ್ತಿದ್ದರು. ಸತ್ತವರ ಹೆಸರಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಇದ್ದರು ಎಂದರು.
ವಾಲ್ಮೀಕಿ ನಿಗಮದಲ್ಲಿ ಲೂಟಿ ಮಾಡಿದಂತೆಯೇ ಇಲ್ಲಿ ಲೂಟಿ ಮಾಡಲು ಇನ್ನು ಸಾಧ್ಯವಿಲ್ಲ. ಬಯೋಮೆಟ್ರಿಕ್ ಹಾಜರಾತಿ ಇರುವುದರಿಂದ ನಕಲಿ ಹೆಸರು ಸೇರಿಸಲು ಸಾಧ್ಯವಿಲ್ಲ. ನಕಲಿ ಜಾಬ್ ಕಾರ್ಡ್‌ಗಳು ರದ್ದಾಗಲಿದೆ. ಆಡಳಿತಾತ್ಮಕ ವೆಚ್ಚವನ್ನು ಕೇಂದ್ರ ಸರಕಾರ 9% ಕ್ಕೆ ಏರಿಸಿದೆ. ವೇತನ ಪಾವತಿಗೂ ಕಾಲಮಿತಿ ನಿಗದಿಪಡಿಸಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಎರಡೂವರೆ ಲಕ್ಷ ಕೋಟಿ ರೂ. ನೀಡಿದ್ದರೆ, ಪ್ರಧಾನಿ ಮೋದಿಯವರ ಅವಧಿಯಲ್ಲಿ 8 ಲಕ್ಷ ಕೋಟಿ ರೂ. ಬಂದಿದೆ. ರಾಜ್ಯ ಸರ್ಕಾರ ನೀಡುವ ಪಾಲು ಕೂಡ ಉದ್ಯೋಗ ಮಾಡುವ ಬಡವರಿಗೆ ತಲುಪಲಿದೆ.
ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ 17,000 ಕೋಟಿ ರೂ. ಬರಲಿದೆ. ಕೇಂದ್ರ ಮತ್ತು ರಾಜ್ಯದ ಪಾಲು ಸೇರಿ ಒಟ್ಟು 27,000 ಕೋಟಿ ರೂ. ಸಿಗಲಿದೆ. ತಾವು 10,000 ಕೋಟಿ ರೂ. ಕೊಡಬೇಕಿದೆ ಎಂಬುದೇ ರಾಜ್ಯ ಸರ್ಕಾರದ ಚಿಂತೆ ಎಂದರು.
ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳ ಸಹಾಯಧನ ಕೈ ಬಿಟ್ಟಿದ್ದರು. ಇದನ್ನು ನಾವು ಕಂಡುಹಿಡಿದ ನಂತರ ತಪ್ಪಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರು. ಒಟ್ಟು 5,000 ಕೋಟಿ ರೂ. ನೀಡಲು ಸರ್ಕಾರದ ಬಳಿ ಹಣವಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ಕೊಡಲು ಕೂಡ ಹಣವಿಲ್ಲ. ಈಗ ಉದ್ಯೋಗ ಖಾತರಿಗೆ ನೀಡಲು ಹಣವಿಲ್ಲ. ಇದೇ ಕಾಂಗ್ರೆಸ್‌ನ ಸಮಸ್ಯೆಯಾಗಿದ್ದು, ಹೀಗಾಗಿ ವಿರೋಧ ಮಾಡುತ್ತಿದ್ದಾರೆ ಎಂದರು.
ಹಿಂದೆ 100 ದಿನಗಳಿದ್ದರೆ, ಈಗ 125 ದಿನಗಳಿವೆ. ರೈತರಿಗೆ ಕೃಷಿ ಕಾರ್ಮಿಕರು ಸಿಗಲಿ ಎಂಬ ಕಾರಣಕ್ಕೆ 60 ದಿನಗಳ ಅಂತರ ನೀಡಲಾಗಿದೆ. ಅದನ್ನೂ ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ. ಹೊಸ ಯೋಜನೆಯ ಮೂಲಕ ಲೂಟಿಗೆ ತಿಲಾಂಜಲಿ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗುತ್ತಿಗೆ ಪಡೆಯಲು ಅಥವಾ ಅಕ್ರಮ ಮಾಡಲು ಆಗುವುದಿಲ್ಲ.
ಶಾಶ್ವತವಾದ ಆಸ್ತಿಗಳನ್ನು ನಿರ್ಮಿಸಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಅದನ್ನೂ ಈ ಯೋಜನೆಯಲ್ಲಿ ಸೇರಿಸಲಾಗಿದೆ. ಹೊಸ ಯೋಜನೆಯಿಂದ ನಿಜವಾದ ಫಲಾನುಭವಿಗಳಿಗೆ ಲಾಭ ದೊರೆಯಲಿದೆ. ಕಾಮಗಾರಿಗಳು ಮೊದಲೇ ನಿರ್ಧಾರವಾಗಲಿದೆ ಎಂದರು.
ಇದನ್ನು ವಿರೋಧಿಸಲು ಕಾಂಗ್ರೆಸ್ ವಿಶೇಷ ಅಧಿವೇಶನ ನಡೆಸಲಿದೆ. ಬಾಂಗ್ಲಾದೇಶದಲ್ಲಿನ 17 ಕೋಟಿ ಜನರಲ್ಲಿ 2 ಕೋಟಿ ಜನರು ಭಾರತಕ್ಕೆ ಬಂದಿದ್ದಾರೆ. ಇಂತಹವರಿಗೆ ಕೋಗಿಲು ಕ್ರಾಸ್‌ನಲ್ಲಿ ಮನೆ ನೀಡಲು ತಯಾರಿ ನಡೆದಿದೆ. ಈ ಬಗ್ಗೆಯಾಗಲೀ ಅಥವಾ ಕೇರಳದ ಶಾಲೆಗಳಲ್ಲಿ ಕನ್ನಡಕ್ಕೆ ಅಪಮಾನ ಆಗುತ್ತಿರುವ ಬಗ್ಗೆಯಾಗಲೀ ವಿಶೇಷ ಅಧಿವೇಶನ ಕರೆದಿಲ್ಲ.
ಕೇರಳದಲ್ಲಿ ಆನೆ ತುಳಿತದಲ್ಲಿ ಮೃತರಾದವರಿಗೆ 30 ಲಕ್ಷ ರೂ. ಪರಿಹಾರ, ಮನೆ ಬಿದ್ದಿದ್ದಕ್ಕೆ 10 ಕೋಟಿ ರೂ. ಪರಿಹಾರ ನೀಡಿದ್ದಾರೆ. ಇವ್ಯಾವುದಕ್ಕೂ ಅಧಿವೇಶನ ಕರೆದಿಲ್ಲ. ಆದರೆ ಹೊಸ ಯೋಜನೆಗೆ ಅನುದಾನವಿಲ್ಲ ಎಂಬ ಕಾರಣಕ್ಕೆ ಅಧಿವೇಶನ ಕರೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಗತ್ಯಕ್ಕೆ ತಕ್ಕಂತೆ ಅಧಿವೇಶನ ಕರೆದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ ಎಂದರು.
ಯೋಜನೆಗೆ ಇಂದಿರಾಗಾಂಧಿ ಹೆಸರಿಟ್ಟರೆ ನಾವು ವಿರೋಧ ಮಾಡಲಿಲ್ಲ. ಕೇಂದ್ರ ಸರ್ಕಾರ ಹಳೆ ಯೋಜನೆ ಬಿಟ್ಟು ಹೊಸ ಯೋಜನೆ ತಂದಿದೆ. ಇದರ ಪ್ರಯೋಜನವನ್ನು ಜನರಿಗೆ ನೀಡಬೇಕು ಎಂದರು.