ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನೀರಿಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಅದೇ ಮಾದರಿಯಲ್ಲೇ ರಾಜ್ಯ ರಾಜಕಾರಣಕ್ಕೆ ಹೊಂದಿಸಿಕೊಂಡು ಎಐ ವಿಡಿಯೋವನ್ನು ರಚಿಸಲಾಗಿದೆ. ನಿಜವಾದ ಟೀಸರ್ ದೃಶ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಇರುವಂತೆ ವಿಡಿಯೋ ರಚಿಸಲಾಗಿದೆ.
The wait ends in 2028#HDKumaraswamy #karnataka #jds #trendingvideo #HDK #toxic #kannada pic.twitter.com/OoGhjAtRI2
— Kumaraswamy for CM (@Kumaraswamy4cm) January 9, 2026
ಎಐ ಟೀಸರ್ನಲ್ಲಿ 2028 ಎಂದು ತೋರಿಸಲಾಗುತ್ತದೆ. 2008ರ ವಿಧಾನಸಭೆ ಚುನಾವಣೆ ಹೊತ್ತಿಗೆ ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಹಿಂದಿರುಗುತ್ತಾರೆ ಎಂದು ವಿಡಿಯೋ ಕೊನೆಯಲ್ಲಿ ಬಿಂಬಿಸಲಾಗಿದೆ.
ಹೆಚ್.ಡಿ.ಕೆಗೆ ಮುಜುಗರ ತಂದ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡರ ಕಿತ್ತಾಟ
ಟಾಕ್ಸಿಕ್ ಟೀಸರ್ ರೀಮೇಕ್ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೇಳಿ ಬಂದ ಬಣ ಬಡಿದಾಟದ ವಿಡಿಯೋ ಮುಂದಿಟ್ಟು ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ? ಎಂದು ಪ್ರಶ್ನಿಸಿದೆ.
ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ? pic.twitter.com/OFIUDWDY43
— Karnataka Congress (@INCKarnataka) January 12, 2026
ಅಚ್ಚರಿ ಎಂದರೆ ಇತ್ತೀಚೆಗೆ ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿನ ವಿಡಿಯೋವನ್ನು ಕಾಂಗ್ರೆಸ್ ಬಳಸಿಕೊಂಡಿದೆ.
ಇದರಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವೆಂಕಟೇಶ್ ಎನ್ನುವ ಕಾರ್ಯಕರ್ತ ಮಾತನಾಡಿ, ಒಂದು ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಲ್ಲಿ ಅವರನ್ನು ಪಕ್ಷದ ಸ್ಥಳೀಯ ಮುಖಂಡರೇ ಸೋಲಿಸುತ್ತಾರೆ. ಅಂತಹ ಕಾಲೆಳೆಯುವ ಮುಖಂಡರು ಸ್ಥಳೀಯ ಜೆಡಿಎಸ್ನಲ್ಲಿದ್ದಾರೆ.
ಸದಾ ಒಬ್ಬರ ಕಾಲು ಮತ್ತೊಬ್ಬರು ಎಳೆಯುವುದರಲ್ಲೇ ಮುಳುಗಿರುವ ಸ್ಥಳೀಯ ಜೆಡಿಎಸ್ ಮುಖಂಡರಿಂದಾಗಿ ಇಲ್ಲಿರುವವರೆಗೂ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸ್ಥಳೀಯ ಮುಖಂಡರ ವರ್ತನೆಯಿಂದ ಬೇಸರಗೊಂಡು ಪಕ್ಷದ ಶಾಲು ಕೆಳಗಿಟ್ಟು ಹೋಗುತ್ತಿದ್ದೇನೆ ಎಂದು ವೆಂಕಟೇಶ್ ಕಾರ್ಯಕರ್ತರ ಸಭೆಯಿಂದ ಹೊರನಡೆದಿದ್ದರು.
ಈ ವಿಡಿಯೋವನ್ನು ಕಾಂಗ್ರೆಸ್ ಬಳಸಿಕೊಂಡಿದ್ದು, ಕುಮಾರಣ್ಣ ಕನಸಿಗೆ ದೊಡ್ಡಬಳ್ಳಾಪುರ ಜೆಡಿಎಸ್ ಬಣ ಬಡಿದಾಟದ ಕೊಳ್ಳಿ ಇಟ್ಟಿದೆ. ಸ್ವಪ್ರತಿಷ್ಠೆಗೆ ಬಿದ್ದಿರುವ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡರಿಂದಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗೇಲಿಗೆ ಒಳಗಾಗುವಂತಾಗಿದೆ ಎಂಬ ಆಕ್ರೋಶ ಕಾರ್ಯಕರ್ತರಲ್ಲಿ ಕೇಳಿಬಂದಿದೆ.