ಬೀದರ್: ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.
ಮೃತ ದುರ್ದೈವಿಯನ್ನು ಬಂಬುಳಗಿ ಗ್ರಾಮದ ಸಂಜು ಕುಮಾರ ಗುಂಡಪ್ಪ (48 ವರ್ಷ) ಎಂದು ಗುರುತಿಸಲಾಗಿದೆ
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕುತ್ತಿಗೆ ಕೊಯ್ದುಕೊಂಡಿದೆ. ಈ ವೇಳೆ ಬೈಕ್ ಮೇಲಿಂದ ಕೆಳಗೆ ಬಿದ್ದು ಸಂಜಕುಮಾರ್ ರಕ್ತದ ಮಡವಿನಲ್ಲಿಯೂ ಮಗಳಿಗೆ ಕರೆ ಮಾಡುವ ವೇಳೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಸಂಕ್ರಾಂತಿ ಆಚರಣೆ ವೇಳೆ ಚಿಟಗುಪ ತಾಲೂಕಿನಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯ ಇದೆ. ಅದನ್ನು ಮನಗಂಡು ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಾಂಚಾಳ ಅವರು ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಮಾಂಜಾ (ದಾರ) ಮಾರಾಟ ನಿಷೇಧಿಸಲಾಗಿದೆ. ಇದರ ನಡುವೆಯೂ ಮಾಂಜಾ ದರ ಬಳಕೆ ಆಗಿದ್ದು, ಈ ಬಗ್ಗೆ ತನಿಖೆ ನಡೆದಿದೆ.