ಬೆಂಗಳೂರು: ಕೇರಳಕ್ಕೆ ತೆರಳಿದ ಅಯ್ಯಪ್ಪ ಭಕ್ತರ ವಾಹನಗಳನ್ನು (Ayyappa devotees’ vehicles) ತಡೆಹಿಡಿದಿರುವ ಸಂಬಂಧ ತ್ವರಿತವಾಗಿ ಸ್ಪಂದಿಸಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಕೇರಳ ಸರಕಾರದೊಂದಿಗೆ ಚರ್ಚಿಸಿದ್ದು, ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಕೇರಳ ಅಧಿಕಾರಿಗಳೊಂದಿಗೆ ಚರ್ಚಿಸಿರುವ ರಾಮಲಿಂಗಾರೆಡ್ಡಿ ಅವರು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.
ರಾಜ್ಯದಿಂದ ತೆರಳುವ ಅಯ್ಯಪ್ಪಸ್ವಾಮಿ ಭಕ್ತರ ವಾಹನಗಳನ್ನು ಕೆಲವು ಕಡೆ ತಡೆದಿರುವ ಹಿನ್ನೆಲೆಯಲ್ಲಿ ಕೇರಳದ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ರಾಮಲಿಂಗಾರೆಡ್ಡಿ ಅವರು ಭಕ್ತಧಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
ಇದರೊಂದಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಾರಿಗೆ ಇಲಾಖೆ ನಿರ್ದೇಶಕ ರಾಜೇಂದ್ರ ಕಟಾರಿಯ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಕೇರಳ ಅಧಿಕಾರಿಗಳ ಜತೆಯೂ ಸಂಪರ್ಕ ಸಾಧಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಸಚಿವರ ಸೂಚನೆ ಮೇರೆಗೆ ರಾಜ್ಯದ ಅಧಿಕಾರಿಗಳ ತಂಡ ರಾಜ್ಯದಿಂದ ಬರುವ ಭಕ್ತರಿಗೆ ಅಡಚಣೆ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕೇರಳ ಅಧಿಕಾರಿಗಳ ಜತೆ ಅಧಿಕಾರಿಗಳು ಚರ್ಚಿಸಿದ ವೇಳೆ, ಕೇರಳ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಪಾಲನೆ ಮಾಡುತ್ತಿದ್ದೇವೆ. ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಆನ್‌ಲೈನ್ ನೊಂದಣಿಯಾಗಿ ಪ್ರತಿದಿನ ಆಗಮಿಸುವ ನಾಲ್ಕು ಸಾವಿರ ವಾಹನಗಳನ್ನು ಮಾತ್ರ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸೂಚನೆ ನೀಡಿರುವುದರಿಂದ ಅದನ್ನು ಪಾಲನೆ ಮಾಡಲಾಗುತ್ತಿದೆ ಎಂದು ಕೇರಳ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.