ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಅಧಿಕಾರಿಗಳನ್ನು ನಿಂದಿಸುವ ಹಾಗೂ ಹಲ್ಲೆ ಮಾಡುವ ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ವಹಿಸಿ ಅಧಿಕಾರಿಗಳನ್ನು ರಕ್ಷಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಗೌಡ ಅವರನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿದ್ದರೂ ಸಚಿವ ಕೆ.ಎಚ್.ಮುನಿಯಪ್ಪ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಆತ ಒಳ್ಳೆಯ ವ್ಯಕ್ತಿ, ಇದರಲ್ಲಿ ಮಹಿಳಾ ಅಧಿಕಾರಿಯದ್ದೇ ತಪ್ಪೆಂದು ಹೇಳಿದ್ದಾರೆ. ಕಳೆದೆರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪುಂಡರು ಸರ್ಕಾರಿ ಕಚೇರಿಗಳನ್ನು ಪಕ್ಷದ ಕಚೇರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಕಚೇರಿಗೆ ಕರೆಸಿ ಚರ್ಚಿಸಿ ಅವರಿಗೆ ನನ್ನ ವಿರೋಧವನ್ನು ತಿಳಿಸಿದ್ದೇನೆ. ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಿಮ್ಮ ಕರ್ತವ್ಯ ಎಂದು ಹೇಳಿದ್ದೇನೆ. ಹೀಗೆ ಮಾತನಾಡಿದವರು ಪರಾರಿಯಾಗಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕೂಡ ಶಾಮೀಲಾಗಿದ್ದಾರೆ ಎಂದರು.
ಇದು ಮುಂದುವರಿದರೆ ಅಧಿಕಾರಿಗಳಿಗೆ ರಕ್ಷಣೆ ಇರುವುದಿಲ್ಲ. ತಪ್ಪಿಸ್ಥರಿಗೆ ಶಿಕ್ಷೆ ನೀಡಲು ಕ್ರಮ ವಹಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇವೆ. ಪಿಎಸ್‌ಐ ಪರಶುರಾಮ್, ನೌಕರ ರುದ್ರಣ್ಣ, ಗ್ರಂಥಪಾಲಕಿ ಭಾಗ್ಯವತಿ ಪ್ರಕರಣಗಳು, ಶಾಸಕ ಬಾಲಕೃಷ್ಣ ತಹಶೀಲ್ದಾರ್‌ಗೆ ಹೊಡೆಯುತ್ತೇನೆಂದು ಹೇಳಿರುವುದು, ಮೊದಲಾದ ಘಟನೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಿಲ್ಲ.
ಅಧಿಕಾರಿಗಳು ಒಂದೋ ಪ್ರತಿಭಟನೆ ಮಾಡಬೇಕು, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ. ಅಧಿಕಾರಿಗೆ ಯಾರಾದರೂ ಹಲ್ಲೆ ಮಾಡಿದರೆ ಮಾಧ್ಯಮಗಳ ಬಳಿ ಹೋಗಬಾರದು ಎಂದೇನಿಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲದ ಅಧಿಕಾರಿ ಮಾಧ್ಯಮಗಳ ಬಳಿ ಹೋದರೆ ಅದರಲ್ಲಿ ತಪ್ಪಿಲ್ಲ. ಶಾಸಕ ಸಿ.ಟಿ.ರವಿ ಅವರ ಪ್ರಕರಣದಲ್ಲಿ ಅವರನ್ನು ಬಂಧಿಸಿ ಕಾಡು ಸುತ್ತಿಸಿದ್ದರು. ಆದರೆ ಇಲ್ಲಿ ಯಾರನ್ನೂ ಬಂಧಿಸಿಲ್ಲ ಎಂದರು.
ಶನಿವಾರ ಬಳ್ಳಾರಿಗೆ ಭೇಟಿ ನೀಡಿ ಪ್ರತಿಭಟಿಸಲಿದ್ದೇನೆ. ಶಾಸಕರ ಮನೆ ಮೇಲೆ ಗುಂಡು ಹಾರಿಸುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಇಲಾಖೆಗೆ ಅನುದಾನವಿಲ್ಲ, ಬಂದೋಬಸ್ತ್ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಕಾನೂನು ಸರಿಯಿದ್ದರೆ ಹೊಸ ಉದ್ಯಮಗಳು ಬರುತ್ತವೆ. ಆದರೆ ಕಾನೂನು ಸುವ್ಯವಸ್ಥೆ ಇಲ್ಲವಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದರು.
ಜೆಬಿಎ ಚುನಾವಣೆಗೆ ಮುಂಬಯಿ ಫಲಿತಾಂಶ ದಾರಿದೀಪ
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದು, ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಜಯ ದೊರೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವಿಎಂ ಮೇಲೆ ಆರೋಪ ಮಾಡಿದ್ದಾರೆಯೇ ಹೊರತು ದಾಖಲೆ ನೀಡಿಲ್ಲ.
ಕಾಂಗ್ರೆಸ್ ಸೋತಿರುವಲ್ಲಿ ಮಾತ್ರ ವೋಟ್ ಚೋರಿ ಎನ್ನುತ್ತಾರೆ. ಕರ್ನಾಟಕ, ತೆಲಂಗಾಣದಲ್ಲಿ ಗೆದ್ದಾಗ ಆರೋಪ ಮಾಡಿಲ್ಲ. ಆದ್ದರಿಂದಲೇ ಅವರ ಮಾತು ಚಲಾವಣೆ ಇಲ್ಲದ ನಾಣ್ಯವಾಗಿದೆ. ಚುನಾವಣಾಧಿಕಾರಿಗಳು ವಿಶೇಷ ಪರಿಷ್ಕರಣೆ ಮೂಲಕ ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಯಿಂದ ಹೊರಗೆ ಕಳುಹಿಸುತ್ತಿದ್ದಾರೆ.
2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದು, ಅಪರಾಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಅಂತಹವರನ್ನು ಕಾಂಗ್ರೆಸ್ ಮತಕ್ಕಾಗಿ ಬಳಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ವಿಶೇಷ ಪರಿಷ್ಕರಣೆ ಮಾಡಿದರೆ ಅದನ್ನು ಬೆಂಬಲಿಸುತ್ತೇವೆ ಎಂದರು.
“Hello monetag”