ಬೆಂಗಳೂರು: ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಮಾರ್ಮಿಕವಾಗಿ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು ಸಚಿವರು. ಕುಮಾರಸ್ವಾಮಿ ಅವರಿಗೆ ಮಾತನಾಡುವ ಚಪಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವ ಮಾತಿಗೆ ಸಚಿವರು ತಿರುಗೇಟು ಕೊಟ್ಟರು.
ನಿಮ್ಮದೊಂದು ರೀತಿ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ನಮ್ಮದು ಜನರ ಸಮ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಟೀಕಾಕಾರರಿಗೆ ಟಾಂಗ್ ಕೊಟ್ಟರು.
ಸ್ವಜಾತಿಯವರಿಂದಲೇ ಅನ್ಯಾಯ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಾನು ಆ ವರದಿಯನ್ನು ನೋಡಿದ್ದೇನೆ. ಕಷ್ಟ ಬಂದ ಕ್ಯಾಸ್ಟ್ ಅಂತಾರೆ. ಆದರೆ ಅವರು ಅವರು ಪ್ರತಿನಿಧಿಸುವ ಜಾತಿಗೆ ಏನು ಮಾಡಿದ್ದಾರ ಬೆಳಗ್ಗೆಯಿಂದ ಸಂಜೆವರೆಗೂ ಹಣ ಹೊಡೆಯಬೇಕು ಎನ್ನುವವರು ಅವರು. ಬೇಕು ಅಂತಾರೆ. ಜನರ ಬೆಂಬಲ ಯಾವ ರೀತಿ ಪಡೆಯಬೇಕು ಎನ್ನುವುದಕ್ಕಿಂತ ಕ್ಷಣ ಕ್ಷಣವೂ ರಾಜ್ಯದ ಲೂಟಿ ಮಾಡಬೇಕು ಎಂದು ಕೆಲಸ ಮಾಡ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಜಾತಿ ಹೆಸರಿನಲ್ಲಿ ಬೆಂಬಲ ಕೊಡ್ತಾರಾ? ಎಂದು ಅವರು ಟೀಕಿಸಿದರು.
ನಾನು ಬಾಯಿ ಚಪಲಕ್ಕೆ ಮಾತಾಡಲ್ಲ. ಇಂಥವರು ನಡೆಸುವ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಕೊಡ್ತಿದ್ದೇನೆ ಅಷ್ಟೇ. ನಾನು ಮಾತನಾಡುವುದು ನನ್ನ ಮತ್ತು ಜನತೆಯ ಸಂಬಂಧ ಬೆಳೆಸಿಕೊಳ್ಳಲು. ಈ ಅಣ್ಣ ತಮ್ಮಂದಿರದ್ದು ಕಟ್ಟಿಕೊಂಡು ನನಗೇನಾಗಬೇಕು? ದಿನ ಬೆಳಗಾದರೆ ಯಾರ ತಲೆ ಒಡೆಯಬೇಕು? ಯಾರ ಜಮೀನಿಗೆ ಫೆನ್ಸಿಂಗ್ ಹಾಕಬೇಕು? ಯಾವ ರೀತಿ ಅಕ್ರಮವಾಗಿ ಸಂಪಾದನೆ ಮಾಡಬೇಕು ಎನ್ನುವ ಜಾತಿ ಹೆಸರು ಹೇಳಿದಾಕ್ಷಣ ಬೆಂಬಲ ಕೊಡ್ತಾರ? ಎಂದು ಖಾರವಾಗಿ ಪ್ರಶ್ನಿಸಿದರು.
ನಿಮ್ಮ ಪಕ್ಷದ ಹಣೆಬರಹ ನೋಡಿ ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು
ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಕುಮಾರಸ್ವಾಮಿ ಅವರು; ನಮ್ಮ ಪಕ್ಷದ್ದು ಹಾಗಿರಲಿ. ಸೋಕಾಲ್ಡ್ ನ್ಯಾಷನಲ್ ಪಾರ್ಟಿ ಕಾಂಗ್ರೆಸ್ ಪಕ್ಷವು ಬಿಹಾರ, ಮಹಾರಾಷ್ಟ್ರದಲ್ಲಿ ಯಾವ ಲೆವೆಲ್ಲಿಗೆ ಬಂದಿದೆ ಎಂಬುದನ್ನು ಮೊದಲು ನೋಡಿಕೊಳ್ಳಿ ಎಂದು ತಿರುಗೇಟು ಕೊಟ್ಟರು.
ಜೆಡಿಎಸ್ ಬಗ್ಗೆ ಚರ್ಚೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಯಾರು? ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಮಂತ್ರಿಗಳು ಎಷ್ಟು ಜನ ಜೆಡಿಎಸ್‌ನಿಂದ ಲೀಸ್ ಮೇಲೆ ಹೋಗಿದ್ದಾರೆ ಎನ್ನುವುದನ್ನು ಮೊದಲು ಅವರಪ್ಪನನ್ನು ಕೇಳಿ ತಿಳಿದುಕೊಳ್ಳಲಿ.
ಮುಖ್ಯಮಂತ್ರಿಗಳಿಂದ ಹಿಡಿದು ಎಷ್ಟು ಜನ ಮಂತ್ರಿಗಳು ಜೆಡಿಎಸ್ ಮೂಲದವರು? ಗೊತ್ತಿದೆಯಾ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಮಿಸ್ಟರ್ ಖರ್ಗೆ ಅವರೇ, ಮೊದಲು ನಿಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳಿ. ನಿಮ್ಮ ಪಕ್ಷದಲ್ಲಿ ಸದ್ಯಕ್ಕೆ ಒಬ್ಬರ ‘ಲೀಸ್ ಅವಧಿ ಮುಗಿದಿದೆ. ನನ್ನನ್ನು ಲೀಸ್ ಮೇಲೆ ಮುಖ್ಯಮಂತ್ರಿ ಮಾಡಿ’ ಎಂದು ಇನ್ನೊಬ್ಬರು ಟವೆಲ್ ಹಾಕಿದ್ದಾರೆ. ಅವರು ನೋಡಿದರೆ ನನ್ನ ಲೀಸ್ ಅವಧಿ ಇನ್ನೂ ಮುಗಿದಿಲ್ಲ. ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಏನು ಮರಿ ಖರ್ಗೆ ಅವರೇ? ಮೊದಲು ನಿಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಿ. ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದು ಕೇಂದ್ರ ಸಚಿವರು ಪ್ರಿಯಾಂಗ್ ಖರ್ಗೆಯನ್ನು ತರಾಟೆಗೆ ತೆಗೆದುಕೊಂಡರು.
ಇವತ್ತು ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದೆ. ಕಾಂಗ್ರೆಸ್ ಎಷ್ಟು ಕಡೆ ಗೆದ್ದಿದೆ. ದುರ ಅಹಂಕಾರ ಬೆಳೆಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಪಕ್ಷದ ರಾಜ್ಯದ ಫಲಿತಾಂಶವೇ ಸಾಕ್ಷಿ.
ಪ್ರಿಯಾಂಕ್ ಖರ್ಗೆ ಅವರೇ ಇಂಥ ವಿಷಯಗಳ ಬಗ್ಗೆ ಮಾತಾಡುವುದು ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ. ನಿಮ್ಮ, ನಿಮ್ಮ ತಂದೆಯವರು ಪ್ರತಿನಿಧಿಸಿರುವ ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಹೇಳಿ. ಮೈಸೂರು, ಕನಕಪುರ ಮತ್ತು ರಾಮನಗರದಲ್ಲಿ ಆಗಿರುವ ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯೇ? ಹಿರಿಯ ಖರ್ಗೆ ಅವರು 40 ವರ್ಷಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿ ಇದ್ದಾರೆ. ನೀವು ಕಳೆದ 8-9 ವರ್ಷದಿಂದ ಮಂತ್ರಿ ಆಗಿದ್ದೀರಿ. ಏನು ಸಾಧನೆ ನಿಮ್ಮದು? ಪಟ್ಟಿ ಕೊಡಿ ನೋಡೋಣ ಎಂದು ಆಗ್ರಹಿಸಿದರು.
ಜೆಡಿಎಸ್- ಬಿಜೆಪಿ ಮೈತ್ರಿ ಕಾರಣಕ್ಕೆ ನಿಮಗೆ ನಿದ್ದೆ ಬರುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯಿಂದ ನಿಮ್ಮ ಹಣೆಬರಹ 9 ಸೀಟುಗಳಿಗೆ ಬಂದಿದೆ. ನಮ್ಮ ಕೆಲ ದೋಷಗಳಿಂದ ನೀವು 9 ಸೀಟು ಗೆದ್ದಿದ್ದೀರಿ. ಇಲ್ಲದಿದ್ದರೆ ರಾಜ್ಯದಲ್ಲಿ ಅಧಿಕಾರ ಇದ್ದರೂ ನಿಮ್ಮ ನ್ಯಾಷನಲ್ ಪಾರ್ಟಿ 3 ಅಥವಾ 4 ಸೀಟುಗಳಿಗೆ ಇಳಿಯುತ್ತಿತ್ತು.
ಜೆಡಿಎಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಥವಾ ಕಾಂಗ್ರೆಸ್ ಪಕ್ಷ ನಾಶ ಆಗುತ್ತಿದೆಯೋ? ಹೇಳುವಿರಾ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಶಾಸಕ ಮೇಲೂರು ರವಿಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಕೇಂದ್ರ ಸಚಿವರ ಜತೆಯಲ್ಲಿ ಇದ್ದರು.