ಬಳ್ಳಾರಿ; ಬಳ್ಳಾರಿಯ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಸರ್ಕಾರ (Congress Government) ನ್ಯಾಯ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಆಗ್ರಹಿಸಿದರು.
ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಬಳಿ ನ್ಯಾಯ ಕೇಳಲು ಬಳ್ಳಾರಿಗೆ ಬಂದಿದ್ದೇವೆ. ಎರಡೂವರೆ ವರ್ಷದಿಂದ ಯಾರು ಆಡಳಿತ ನಡೆಸುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಗೃಹ ಸಚಿವರು ಯಾರೆಂದು ಇನ್ನೂ ತಿಳಿದಿಲ್ಲ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ಕೊಡಲು ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಪ್ರತಿ ಜಿಲ್ಲೆಗಳಲ್ಲಿ ಪ್ರತ್ಯೇಕ ಗೃಹ ಸಚಿವರಿದ್ದಾರೆ. ಕಾಂಗ್ರೆಸ್ ನಾಯಕರಿಂದಾಗಿ ಅಮಾಯಕ ಕಾರ್ಯಕರ್ತ ಬಲಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ ಎಂದರು.
ಜನವರಿ 1 ರಂದು ಎಲ್ಲ ಕಡೆ ಹೊಸ ವರ್ಷದ ಆಚರಣೆಗಾಗಿ ಪಟಾಕಿ ಸಿಡಿಯುತ್ತಿದ್ದರೆ, ಬಳ್ಳಾರಿಯಲ್ಲಿ ಗುಂಡಿನ ಸುರಿಮಳೆ ಆಗುತ್ತಿತ್ತು. ಗುಂಡು ಹಾರಿಸಿದವರು ಯಾರೆಂದು ಪೊಲೀಸರಿಗೆ ಇನ್ನೂ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಕಡೆಯವರಿಂದ ಗುಂಡು ಹಾರಿದ್ದರೆ ಪೊಲೀಸರು ಪ್ರತಿ ಮನೆಗೆ ಬಂದು ಲಾಠಿ ಏಟು ಕೊಟ್ಟು ಎಲ್ಲರನ್ನೂ ಬಂಧಿಸುತ್ತಿದ್ದರು.
ಕಾಂಗ್ರೆಸ್ ಕಡೆಯವರೇ ಆಗಿರುವುದರಿಂದ ಕೊಲೆ ಮಾಡಿದವರನ್ನು ಇನ್ನೂ ಬಂಧನ ಮಾಡಿಲ್ಲ. ಗುಂಡು ಹಾರಿಸಿದ್ದ ಗನ್‌ಮ್ಯಾನ್‌ನನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ. ಈ ಬಗ್ಗೆ ನಾನು ವಿಚಾರಿಸಿದಾಗ ಅಚಾನಕ್ಕಾಗಿ ಗುಂಡು ಹಾರಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ ಗುಂಡು ಹಾರಿಸಿದರೆ ಪೊಲೀಸರು ಬಿಟ್ಟುಬಿಡುತ್ತಾರೆಯೇ? ಈಗ ಕೊಲೆಗಾರರು ಬೆಂಗಳೂರಿನಲ್ಲಿ ಆರಾಮವಾಗಿ ಇದ್ದಾರೆ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.
ಪೊಲೀಸರು ನ್ಯಾಯ ಕೊಡಲು ವಿಫಲರಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಬಳ್ಳಾರಿಯಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಈಗ ಇಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಅಂತಹ ದಾಳಿ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕಾಗಿತ್ತು. ಜನಾರ್ದನ ರೆಡ್ಡಿಯವರ ಮೇಲೆ ದಾಳಿ ಮಾಡಲು ಬೇರೆ ಬೇರೆ ಪ್ರಯತ್ನ ನಡೆದರೂ ಕ್ರಮ ವಹಿಸಿಲ್ಲ.
ಈ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಧಿಕಾರಿಗೆ ಬೆದರಿಕೆ ಹಾಕುತ್ತಾನೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲ ನೀಡುತ್ತಾರೆ. ಕುಕ್ಕರ್ ಬಾಂಬ್ ಹಾಕುವವರು, ಬೆದರಿಕೆ ಹಾಕುವವರು ಇವರಿಗೆ ಬ್ರದರ್‌ಗಳಾಗಿದ್ದಾರೆ ಎಂದರು.
ಎರಡು ವರ್ಷದ ಬಳಿಕ ಅಧಿಕಾರ ಇರುವುದಿಲ್ಲ ಎಂದು ಗೊತ್ತಾಗಿರುವುದರಿಂದಲೇ ಇಷ್ಟೆಲ್ಲ ಹಲ್ಲೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರಶ್ನೆ ಮಾಡಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಸಾಧ್ಯವಾದರೆ ಜನರಿಗೆ ಒಳಿತು ಮಾಡಬೇಕು, ಇಲ್ಲವಾದರೆ ತೊಲಗಬೇಕು.
ಪೊಲೀಸರು ಜನರಿಗೆ ರಕ್ಷಣೆ ನೀಡಬೇಕು. ಆದರೆ 7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ. ಕರ್ನಾಟಕ ಪೊಲೀಸ್ ಎಂದರೆ ದೇಶಕ್ಕೆ ಮಾದರಿಯಾಗಿತ್ತು. ಆ ವ್ಯವಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿಬಿಟ್ಟಿದೆ ಎಂದರು.
ಜನರು ನೆನಪಿಸಿಕೊಳ್ಳುವಂತೆ ಪೊಲೀಸರು ಕೆಲಸ ಮಾಡಬೇಕು. ಆದರೆ ಬಳ್ಳಾರಿಯಲ್ಲಿ ಹೊಸ ವರ್ಷದಲ್ಲೇ ಒಂದು ಕುಟುಂಬದಲ್ಲಿ ಸೂತಕ ಕಂಡುಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನೊಂದವರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರಿಂದ ಪರಿಹಾರ
ಮೃತ ರಾಜಶೇಖರ ಅವರ ಬಡ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಅವರ ತಾಯಿಯನ್ನೂ ಭೇಟಿ ಮಾಡಿದ್ದೇವೆ. ಅವರಿಗೆ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬ್ಯಾನರ್ ಕಟ್ಟುವ ವಿಚಾರವಾಗಿ ಜ.1ರಂದು ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಘರ್ಷಣೆ ವೇಳೆ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರರನ್ನು ಕೊಲೆ ಮಾಡಿದ್ದಾರೆ. ಅವರೇ ಗುಂಡು ಹಾರಿಸಿದ್ದರಿಂದ ಪ್ರಾಣ ಕಳಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಬಳ್ಳಾರಿಯ (Bellary) ರಾಜಶೇಖರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಚೆಲ್ಲಾಟ ಆಡದೇ ಸಮಗ್ರ ತನಿಖೆ ಮಾಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಲು ಸಿಬಿಐ (CBI) ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.