ಮೈಸೂರು: ಸುತ್ತೂರು ಜಾತ್ರೆಗೆ ಬಂದು ನಾಟಕ ವೀಕ್ಷಿಸಿ ಗದ್ದುಗೆ ಬಳಿ ಮಲಗಿದ್ದ ಭಕ್ತರ ಮೇಲೆ ಕಾರು ಹರಿದು ಒಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯ ಗೊಂಡಿರುವ ಘಟನೆ (Accident) ಬಿಳಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತನನ್ನು ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದ ಪ್ರದೀಪ್ ಎಂದು ಗುರುತಿಸಲಾಗಿದೆ. ರವಿ ಗಂಭೀರವಾಗಿ ಗಾಯಗೊಂಡವ.
ಸುತ್ತೂರು ಜಾತ್ರೆ ನಿಮಿತ್ತ ಆಯೋಜಿಸಿದ್ದ ಪೌರಾಣಿಕ ನಾಟಕ ವೀಕ್ಷಿಸಿದ ಇಬ್ಬರು ಗದ್ದುಗೆ ಬಳಿ ಮಲಗಿದ್ದರು ಎನ್ನಲಾಗಿದೆ. ಈ ವೇಳೆ ಕಾರು ಭಕ್ತರ ತಲೆ ಮೇಲೆ ಹರಿದಿದೆ. ಬಳಿಕ ಕಾರು ಚಾಲಕ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜನಗೂಡು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಂತ್ವನ ಹೇಳಿದರು.