ಕೆ.ಎಂ. ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ); ನಗರದ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ (Fast-unto-death Satyagraha) ಮೂರನೇ ದಿನ ಶನಿವಾರ ಮಧ್ಯಾಹ್ನ ಅಂತ್ಯಗೊಂಡಿದೆ.
ಒಳಚರಂಡಿ ನೀರನ್ನು ಶುದ್ದೀಕರಿಸಿ ಬಿಡುವ ಸಲುವಾಗಿ ಎಸ್ಟಿಪಿ ಘಟಕ ಸ್ಥಾಪಿಸಬೇಕೆಂದು ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಹಾಗೂ ‘ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳಿಂದ ತಾಲೂಕು ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿತ್ತು.
ಶುಕ್ರವಾರ ರಾತ್ರಿ ಅಸ್ವಸ್ಥರಾಗಿದ್ದ ಹೋರಾಟಗಾರರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ನಮಗೆ ಇಲ್ಲಿನ ಯಾವುದೇ ಅಧಿಕಾರಿಗಳ ಭರವಸೆ ಬೇಡ. ಎಸ್ಟಿಪಿ ಘಟಕಕ್ಕೆ 57 ಕೋಟಿ ರೂ ಮಂಜೂರು ಮಾಡುವ ಸರ್ಕಾರದ ಕಾರ್ಯದರ್ಶಿಗಳು ಇಲ್ಲಿಗೆ ಬಂದು ಉತ್ತರ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಉಪವಾಸ ಕೈಬಿಡಿ ಎಂದು ಭರವಸೆ ನೀಡಲು ಬಂದ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಪ್ರತ್ಯುತ್ತರ ನೀಡಿದ್ದರು.
ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಬೆಳಿಗ್ಗೆ ಭೇಟಿ ಮಾಡಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದ್ದರು.
ತಹಶೀಲ್ದಾರ್ ಮನವಿ
ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಮಾತನಾಡಿ, ಎಸ್ಟಿಪಿ ಕಾಮಗಾರಿಯ ಅಂದಾಜು ಯೋಜನಾ ವೆಚ್ಚದ ಕುರಿತಾಗಿ ವರದಿ ಸಲ್ಲಿಸಿದ್ದು, ಅನುದಾನಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ತುರ್ತಾಗಿ ಹುಬ್ಬಳ್ಳಿಗೆ ಹೋಗಬೇಕಾಗಿರುವುದರಿಂದ ಮಂಗಳವಾರ ಸಭೆ ನಡೆಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಲು ಹೇಳಿ ಎಂದು ಹೇಳಿ ಕಳುಹಿಸಿದ್ದಾರೆ.
ಮುಂದೆ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಹೋರಾಟಗಾರರು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಹೋರಾಟ ಕೈಬಿಡಿ ಎಂದು ಮನವಿ ಮಾಡಿದರು.
ಪೌರಾಯುಕ್ತ ಆರ್.ಕಾರ್ತಿಕೇಶ್ವರ ಮಾತನಾಡಿ, ಎಸ್ಟಿಪಿ ಘಟಕ ಸ್ಥಾಪನೆ ಅನುದಾನ ಬಂದರೆ ಎಲ್ಲಾ ಸಮಸ್ಯೆಗೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಭೇಟಿ ಫಲಪ್ರದವಾಗಿದೆ. ಇಲ್ಲಿನ ವಿದ್ಯಮಾನಗಳನ್ನು, ಸತ್ಯಾಗ್ರಹ ಕುರಿತ ಮಾಧ್ಯಮ ವರದಿಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಗಳು ಮಂಗಳವಾರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಉಪವಾಸ ಅಂತ್ಯ:
ದೊಡ್ಡಬಳ್ಳಾಪುರ ನಗರಸಭೆ ಅನುದಾನವನ್ನು ಜಮೀನಿನ ಖರೀದಿಗೆ ಬಳಸಬೇಕು. ಹೆಚ್ಚುವರಿ ಅನುದಾನ ಎಸ್ಟಿಪಿ ಘಟಕ ಸ್ಥಾಪನೆಗೆ ವಿನಿಯೋಗಿಸಬೇಕು. ಮುಖ್ಯಮಂತ್ರಿ ಭರವಸೆ ನೀಡಿರುವ ಹಿನ್ನಲೆಯಲ್ಲಿ ಹೋರಾಟ ಹಿಂಪಡೆಯುತ್ತೇವೆ ಎಂದು ಹೋರಾಟಗರರು ಸತ್ಯಾಗ್ರಹ ಅಂತ್ಯಗೊಳಿಸಿದರು.
ಉಪವಾಸ ಸತ್ಯಾಗ್ರಹ ನಿರತರಿಗೆ ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.