ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲುಕುಡಿ (Hulukudi) ಕ್ಷೇತ್ರದಲ್ಲಿ ರಥ ಸಪ್ತಮಿ ಅಂಗವಾಗಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಬ್ರಹ್ಮ ರಥೋತ್ಸವ ಭಾನುವಾರ ಅದ್ಧೂರಿಯಾಗಿ ನೆರವೇರಿತು.
ರಥೋತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಭಕ್ತರು ಭಾಗವಹಿಸಿ ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ರಥೋತ್ಸವದಲ್ಲಿ ಭಾಗವಹಿಸಿದ್ದ ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತಗಳು ಮೆರುಗು ನೀಡಿದವು. ರಥೋತ್ಸವದ ಅಂಗವಾಗಿ ರುದ್ರಾಭಿಷೇಕ,ದೇವಾಲಯದಲ್ಲಿ ರಥಾಂಗ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು.
ಎಡಯೂರು ಸುಕ್ಷೇತ್ರದ ರಂಭಾಪುರಿ ಶಾಖಾ ಮಠದ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನೆ ನೀಡಿದರು.
ಶಾಸಕ ಧೀರಜ್ ಮುನಿರಾಜ್, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ಟ್ರಸ್ಟೀಗಳು ಭಾಗವಹಿಸಿದ್ದರು.
ರಥೋತ್ಸವದ ಅಂಗವಾಗಿ ಶನಿವಾವಾರ ಸಂಜೆ ರಥಾಂಗ ಹೋಮ, ಸಂಜೆ ಅಗ್ನಿ ಕುಂಡ ಪೂಜೆ, ಕಳಸ ಪೂಜೆ, ಉಯ್ಯಾಲೋತ್ಸವ ಮತ್ತು ವೀರಗಾಸೆ ಕುಣಿತದೊಂದಿಗೆ ಅಗ್ನಿಕುಂಡ ಹಾಯುವುದು, ಅಕ್ಕಿಪೂಜೆ ಪ್ರಸನ್ನ ಭದ್ರಕಾಳಮ್ಮ ವೀರಭದ್ರಸ್ವಾಮಿ ಕಲ್ಯಾಣೋತ್ಸವ ಹಾಗೂ ದೀಪಾರಾಧನೆ ಕಾರ್ಯಕ್ರಮಗಳು ನಡೆದವು.