ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): 2025ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 85ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದ ಅಪಘಾತ (Accident) ಪ್ರಕರಣಗಳು 2026ರ ಆರಂಭದಲ್ಲಿಯೂ ಮುಂದುವರಿದೆ.
ಜನವರಿ ಮೊದಲ ತಿಂಗಳಲ್ಲಿಯೇ ಮಾಧ್ಯಮಗಳ ವರದಿಯಂತೆ 4 ಮಂದಿ ಸಾವನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
2025ರ ಮಾಧ್ಯಮ ವರದಿಗಳ ಮಾಹಿತಿ ಗಮನಿಸಿದಾಗ ಕೇವಲ ಅಪಘಾತಗಳಿಂದಾಗಿಯೇ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಮಂದಿ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 50 ಮಂದಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಮಂದಿ, ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಮಂದಿ ಸೇರಿ 85 ಮಂದಿ ಜೀವ ಕಳೆದುಕೊಂಡಿದ್ದಾರೆ. ವರದಿಯಾಗದ ಪೊಲೀಸ್ ಮಾಹಿತಿ ಹೊರತುಪಡಿಸಿ.
ದೊಡ್ಡಬಳ್ಳಾಪುರ ತಾಲ್ಲೂಕಿನ ನಾಲ್ಕು ದಿಕ್ಕುಗಳನ್ನು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸುತ್ತುವರೆದಿವೆ. ಇದರಿಂದ ದೂರದ ನಗರಗಳು ಸಮೀಪವಾಗಿವೆ. ಹಾಗೆಯೇ ಸಾವು, ನೋವುಗಳ ಸಂಖ್ಯೆಯು ಹೆಚ್ಚಾಗುತ್ತಿವೆ.
ಹೌದು ಹೆದ್ದಾರಿಗಳಲ್ಲಿ ಸರಿಯಾದ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ, ಅಪಘಾತ, ಪ್ರಾಣಹಾನಿ ಮಾತ್ರ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿ ಇದೆ.
ಚಾಲಕರ ಸಂಚಾರ ನಿಯಮ ಪಾಲನೆ ತಪ್ಪು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ತಿರುವು, ರಸ್ತೆ ಉಬ್ಬುಗಳು, ರಸ್ತೆ ಬದಿಯಲ್ಲಿಯೇ ವಾಹನಗಳ ನಿಲುಗಡೆಯೂ ಕಾರಣವಾಗುತ್ತಿವೆ.
ದಾಬಸ್ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ, ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿಗಳು ನಿರ್ಮಾಣದ ನಂತರ ವಾರದಲ್ಲಿ ಎರಡು, ಮೂರು ಅಪಘಾತ, ಸಾವುಗಳು ಸಾಮಾನ್ಯ ಎನ್ನುವಂತಾಗಿವೆ.
ದೊಡ್ಡಬಳ್ಳಾಪುರದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದ ಸಾವು, ನೋವು ಒಂದೇ ಸಮ ಸಂಭವಿಸುತ್ತಿದ್ದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಉಳಿದಿದ್ದಾರೆಂದು ಎಂಬ ಆರೋಪ ವ್ಯಾಪಕವಾಗಿದೆ.
ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಿಂದಾಗಿ ತಾಲೂಕಿನಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂಬುದು ಆಕ್ರೋಶ.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಪಘಾತ ತಡೆಗೆ ಕಠಿಣವಾದ ಕ್ರಮಕೈಗೊಳ್ಳಬೇಕಿದೆ. ಖಾಸಗಿ ಆಸ್ಪತ್ರೆ ಅಂಬುಲೆನ್ಸ್ಗಳು ಅಪಘಾತ ವಲಯದಲ್ಲಿ ಕಾದು ನಿಲ್ಲುವಂತೆ, ಅಪಘಾತ ತಡೆಗಟ್ಟಲು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಬೇಕಿದೆ.
ಉಳಿದಂತೆ ಸ್ಪೀಡ್ ಬ್ರೆಕರ್ ಅಳವಡಿಸುವುದು, ರಿಪ್ಲೆಕ್ಟರ್ ಅಳವಡಿಸುವುದ ಜೊತೆಗೆ ಹಣ ಸುಲಿಗೆ ಮಾಡಲಿಕ್ಕೆ ಮಾತ್ರ ಸೀಮಿತ ಎಂಬಂತೆ, ವಾಹನ ಸವಾರರ ಸುರಕ್ಷತೆ ಮರೆತಿರುವ ಟೋಲ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೊಡ್ಡಬಳ್ಳಾಪುರ ತಾಲೂಕಿನ ಜನತೆ ಮನವಿ ಮಾಡಿದ್ದಾರೆ. ( ಸಂಗ್ರಹ ಸಾಂದರ್ಭಿಕ ಚಿತ್ರ ಬಳಸಲಾಗಿದೆ)