ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.
ಅಂತೆಯೇ ಬಜೆಟ್‌ನಲ್ಲಿ ಕೇರಳ ರಾಜ್ಯವನ್ನು ಮೋದಿ ಸರ್ಕಾರ ನಿರ್ಲಕ್ಷಿಸಿರುವ ಕ್ರಮವನ್ನು ಖಂಡಿಸಿ ಇಂದು ಕಪ್ಪು ದಿನವನ್ನು ಆಚರಿಸಲಾಗುವುದು ಎಂದು ಆಡಳಿತಾರೂಢ ಸಿಪಿಎಂ ತಿಳಿಸಿದೆ.
ಬಜೆಟ್ ಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 29 ಬೇಡಿಕೆಗಳನ್ನು ಸಲ್ಲಿಸಲಾಗಿತ್ತು, ಆದರೆ ಅವುಗಳಲ್ಲಿ ಯಾವುದನ್ನೂ ಸ್ವೀಕರಿಸಿಲ್ಲ.
ಭಾರತದ ಭೂಪಟದಲ್ಲಿ ಕೇರಳ ಅಸ್ತಿತ್ವ ದಲ್ಲಿಲ್ಲ ಎಂಬಂತೆ ಕೇಂದ್ರ ಬಜೆಟ್ ಮಂಡಿಸಲಾಗಿದೆ ಎಂದು ಪಕ್ಷದ ಕೇರಳ ರಾಜ್ಯ ಕಾರ್ಯದರ್ಶಿ ಹೇಳಿಕೆಯಲ್ಲಿ ದೂರಿದ್ದಾರೆ.
ಏಮ್ಸ್ ಬೇಡಿಕೆಯನ್ನು ಕೇಂದ್ರ ಮತ್ತೊಮ್ಮೆ ನಿರ್ಲಕ್ಷಿಸಿದೆ. ಏಳು ಹೈಸ್ಪೀಡ್ ರೈಲು ಕಾರಿಡಾರ್, ಒಳನಾಡು ಜಲ ಸಾರಿಗೆ ಯೋಜನೆಗಳಿಂದಲೂ ರಾಜ್ಯವನ್ನು ಹೊರಗಿಡಲಾಗಿದೆ. ವಿಳಿಂಜಂ ಬಂದರಿಗೆ ಯಾವುದೇ ವಿಶೇಷ ಪ್ಯಾಕೇಜ್‌ಗೆ ಅನುಮೋದನೆ ನೀಡಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಪಕ್ಷದ ಬೂತ್ ಮಟ್ಟದ ಜಾಗಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸಲಾಗುವುದು, ಜನವಿರೋಧಿ ಕೇಂದ್ರ ಬಜೆಟ್ ವಿರುದ್ದ ನಡೆಯುವ ಪ್ರತಿಭಟನೆ ಗಳಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.