ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮ ಪಂಚಾಯತಿಗಳ (Gram Panchayat) ವ್ಯಾಪ್ತಿಯಲ್ಲಿ ತೈವಾನ್ ಮೂಲದ ಫಾಕ್ಸ್ ಕಾನ್ (Foxconn) ಕಂಪನಿಗೆ ನೀಡಿರುವ 300 ಎಕರೆ ಜಮೀನನ್ನು ಜ. 29ರಂದು ವಿಶೇಷ ಹೂಡಿಕೆ ವಲಯ (SER) ಎಂದು ಘೋಷಿಸಲಾಗಿದೆ.
ಹೀಗಾಗಿ ತೆರಿಗೆ ಪಾವತಿಸಬೇಕು ಎಂದು ಸೂಚಿಸಿ ಈ ಹಿಂದೆ ನೀಡಿದ್ದ ನೋಟೀಸನ್ನು ರದ್ದು ಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ಕೆ.ಎನ್ ಅನುರಾಧ ಹೇಳಿದ್ದಾರೆ.
ಈ ಸಂಬಂಧವಾಗಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಫಾಕ್ಸ್ ಕಾನ್ ಕಂಪನಿಗೆ ನೀಡಿರುವ ಪ್ರದೇಶವು ಇದುವರೆಗೂ ಎರಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲೇ ಇತ್ತು. ಇದುವರೆಗೂ ಆ ಕಂಪನಿಗೆ ತೆರಿಗೆ ಪಾವತಿಸಲು ಸೂಚಿಸಿ ಎಂಟು ಸಲ ನೋಟಿಸ್ ನೀಡಲಾಗಿತ್ತು. ಆದರೆ ಅದು ಯಾವುದಕ್ಕೂ ಉತ್ತರಿಸಿಲ್ಲ.
ಈಗ ಈ ಪ್ರದೇಶವನ್ನು ಎಸ್ಐಆರ್ ಎಂದು ಘೋಷಿಸಿರುವುದರಿಂದ ಗ್ರಾಪಂ ಕಡೆಯಿಂದ ನೋಟೀಸ್ ನೀಡುವ ಪ್ರಮೇಯವೇ ಉದ್ಭವಿಸದು ಎಂದು ಅವರು ಹೇಳಿದ್ದಾರೆ.