ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿ ಖಾಸಗಿ ಕ್ಷಣದ ವಿಡಿಯೊ ಸೆರೆಹಿಡಿದು ಪತ್ರಕರ್ತರ (Journalist) ಸೋಗಿನಲ್ಲಿ 50 ಲಕ್ಷ ರೂ.ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಮೂವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗೋಕಾಕ್‌ನ ಜಲಾಲ್ ಗಲ್ಲಿಯ ಸಮೀರ್ ನಿಸಾರ್ ಅಹಮ್ಮದ್ ಶೇಖ್ (32 ವರ್ಷ), ಗೋಕಾಕ್ ತಾಲೂಕಿನ ಯೋಗಿಕೊಳ್ಳದ ಅಬ್ದುಲ್ ರಶೀದ್ ನಜೀರ್ ಅಹಮ್ಮದ್ ಮಕಾಂದಾರ್ (51 ವರ್ಷ) ಹಾಗೂ ಘಟಪ್ರಭಾದ ಮೊಹಮ್ಮದ್ ದಿಲಾವರ್ ಬಾಳೇಕುಂದ್ರಿ (43 ವರ್ಷ) ಗೋಕಾಕ್ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಲ್ಲಿ ಬಂಧಿಸಲಾಗಿರುವ ಮೂವರು ಆರೋಪಿಗಳು ಪತ್ರಕರ್ತರ ಸೋಗಿನಲ್ಲಿ ಈ ರೀತಿಯ ಕೃತ್ಯ ಎಸಗಿದ್ದರು ಎನ್ನಲಾಗಿದೆ.
ಮಹಿಳಾ ಅಧಿಕಾರಿಯ ಮನೆ ಕೆಲಸದವಳ ಸಹಾಯ ಪಡೆದು ಅಧಿಕಾರಿ ಮನೆಯ ಇತರ ಭಾಗದಲ್ಲಿ ಹಿಡನ್ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ಅವರ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ 50 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡಿದ್ದಾರೆಂದು ವರದಿಯಾಗಿದೆ.
ಮಹಿಳಾ ಅಧಿಕಾರಿ ಪ್ರಕರಣ ದಾಖಲಿಸಲು ಮುಂದಾಗುತ್ತಿದ್ದಂತೆ ಆರೋಪಿಗಳು ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.