ದೊಡ್ಡಬಳ್ಳಾಪುರ: ನಗರದ ನ್ಯಾಯಾಲಯದ (Court) ಆವರಣದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ (Dr.K. Sudhakar) ಅವರಿಗೆ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದಿಂದ ಮನವಿ ಪತ್ರ ಸಲ್ಲಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಕೆ. ಕನಕರಾಜು, ಉಪಾಧ್ಯಕ್ಷ ಕೆ.ಜಗನ್ನಾಥ ಅವರು ಇಂದು ಬೆಂಗಳೂರಿನ ಸಂಸದ ಸುಧಾಕರ್ ಅವರ ಗೃಹ ಕಚೇರಿಗೆ ಭೇಟಿ ನೀಡಿ, ಮನವಿ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಶ್ರೀರಾಮ ಆಸ್ಪತ್ರೆಯ ಡಾ.ವಿಜಯ್ ಕುಮಾರ್ ಇದ್ದರು.
ಇನ್ನೂ ಮನವಿ ಪತ್ರದಲ್ಲಿ ಉಲ್ಲೇಖಿತ ಅಂಶಗಳನ್ನು ಗಮನಿಸುವುದಾದರೆ, ದೊಡ್ಡಬಳ್ಳಾಪುರ ತಾಲ್ಲೂಕು ನ್ಯಾಯಾಲಯದ ಆವರಣದಲ್ಲಿ ಪ್ರಸ್ತುತ ಆರು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ದೈನಂದಿನ ಕಲಾಪಗಳಿಗಾಗಿ ತಾಲ್ಲೂಕಿನಾದ್ಯಂತ ಸಾವಿರಾರು ಸಾರ್ವಜನಿಕರು ಭೇಟಿ ನೀಡುತ್ತಾರೆ. ಅಲ್ಲದೆ, ಸುಮಾರು 600ಕ್ಕೂ ಹೆಚ್ಚು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ವಕೀಲರ ಹಿತದೃಷ್ಟಿಯಿಂದ ಈ ಕೆಳಗಿನ ಮೂಲಭೂತ ಸೌಕರ್ಯಗಳ ತುರ್ತು ಅಗತ್ಯವಿದ್ದು, ತಾವು ದಯಮಾಡಿ ನಿಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅನುದಾನದ ಅಡಿಯಲ್ಲಿ ಈ ಕೆಲಸಗಳನ್ನು ಮಾಡಿಕೊಡಬೇಕೆಂದು ವಿನಂತಿಸಲಾಗಿದೆ.
ಇದರಲ್ಲಿ ಪ್ರಮುಖವಾಗಿ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕ (RO Plant).
ಶೌಚಾಲಯ ಸಂಕೀರ್ಣ: ವಿಶೇಷವಾಗಿ ಮಹಿಳಾ ವಕೀಲರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಶೌಚಾಲಯಗಳ ನಿರ್ಮಾಣ, ವಕೀಲರು ಕಾನೂನು ಸಂಶೋಧನೆ ನಡೆಸಲು ಮತ್ತು ಇತ್ತೀಚಿನ ತೀರ್ಪುಗಳನ್ನು ವೀಕ್ಷಿಸಲು ಸುಸಜ್ಜಿತ ಡಿಜಿಟಲ್ ಗ್ರಂಥಾಲಯದ ಅವಶ್ಯಕತೆ ಇರುತ್ತದೆ ಎಂದು ಮನವಿ ಮಾಡಲಾಗಿದೆ.