ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊನಘಟ್ಟ ಗ್ರಾಮದ ಸಮೀಪ ಎತ್ತಿಹೊಳೆ ಪೈಪ್ ಲೈನ್ ಅಳವಡಿಸಲು ತೋಡಲಾಗುತ್ತಿರುವ ಕಾಲುವೆಗಳಲ್ಲಿ ಕಲ್ಲು ಬಂಡೆಗಳನ್ನು ತೆಗೆಯಲು ಬೃಹತ್ ಪ್ರಮಾಣದ ಗುಣಿಗಳನ್ನು ಕೊರೆದು ಸಿಡಿಮದ್ದು (Explosives) ಬಳಸುತ್ತಿರುವುದರಿಂದ ಮನೆಗಳ ಕಟ್ಟಡಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಸಮೀಪದಲ್ಲಿ ಗುಣಿಗಳನ್ನು ಕೊರೆದು ಶಕ್ತಿಶಾಲಿ ಸಿಡಿ ಮದ್ದು ಬಳಸುತ್ತಿರುವುದರಿಂದ, ಮನೆಗಳ ಗೋಡೆಗಳು ಬಿರುಕು ಬೀಳುತ್ತಿದ್ದು, ಗೋಡೆಗಳು ಹಾನಿಯಾಗಿ ಬೀಳುವ ಸಂಭವವೂ ಇವೆ. ಇದರಿಂದ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಯಾವುದೇ ಹಾನಿಯಾಗದಂತೆ ಸಿಡಿಮದ್ದುಗಳನ್ನು ಬಳಸಲು ಸೂಚಿಸಬೇಕಿದೆ ಎಂದು ಗ್ರಾಮದ ರೈತ ಬಾಬು ಒತ್ತಾಯಿಸಿದ್ದಾರೆ.