ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ (Accident), ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ನುಜ್ಜುಗುಜ್ಜಾಗಿ, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಮೇಷ್ಟ್ರು ಮನೆ ಕ್ರಾಸ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದೆ.
ಕೊಡಿಗೇಹಳ್ಳಿ ಸರ್ವೀಸ್ ರಸ್ತೆಯ ಮೂಲಕ ತಿಪ್ಪೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಚಾಲಕ ದಾವಣಗೆರೆ ಮೂಲದ ವೇದಮೂರ್ತಿ (22 ವರ್ಷ) ಅವರ ಕೈ ಮತ್ತು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನಿಂದ ಹಾವೇರಿಗೆ ಕಲ್ಲಂಗಡಿಗಳನ್ನು ತುಂಬಿಕೊಂಡು ಬಂದ ಕ್ಯಾಂಟರ್ ದಾರಿ ತಪ್ಪಿದ್ದು, ಕೊಡಿಗೇಹಳ್ಳಿ ಸರ್ವೀಸ್ ರಸ್ತೆಯ ಮೂಲಕ ಮತ್ತೆ ರಾಷ್ಟ್ರೀಯ ಹೆದ್ದಾರಿ ಸಾಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇನ್ನೂ ಅನಾತವಾಗಿದ್ದ ಕ್ಯಾಂಟರ್‌ನಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಲ್ಲಂಗಡಿ ಹಣ್ಣುಗಳನ್ನು ಕದ್ದೊಯ್ಯಲು ಜನ ಮುಗಿ ಬಿದ್ದಿದ್ದು, ದ್ವಿಚಕ್ರ ವಾಹನ, ಆಟೋ ಮುಂತಾದ ವಾಹನಗಳಲ್ಲಿ ಚೀಲಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಈ ಘಟನೆ ವರದಿಯಾಗಿದೆ.