ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Cm Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ.
ದಾಖಲೆಯ 17ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ.
ಕೃಷಿ
ʻರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆʼ ಎಂಬ ದೃಢ ನಂಬಿಕೆಯಿಂದ ಪ್ರೇರಿತವಾಗಿ ನಮ್ಮ ಸರ್ಕಾರವು ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಆಧಾರಸ್ತಂಭಗಳ ಮೇಲೆ ಕೃಷಿ ಅಭಿವೃದ್ಧಿ ತಂತ್ರವನ್ನು ರೂಪಿಸಿದೆ. ಮೊದಲನೆಯ ಆಧಾರಸ್ತಂಭ ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಎರಡನೆಯದು ರೈತರಿಗೆ ಹಣಕಾಸು ನೆರವು, ಮೂರನೆಯದು ಉತ್ತಮ ಗುಣಮಟ್ಟದ ಕೃಷಿಪರಿಕರಗಳನ್ನು ಒದಗಿಸುವುದು ಮತ್ತು ಬೆಳೆಗಳ ನಿರ್ವಹಣೆ ಹಾಗೂ ನಾಲ್ಕನೆಯದು ಕೊಯ್ಲೋತ್ತರ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ. ಇದರಿಂದ ಪ್ರತಿಯೊಬ್ಬ ರೈತರ ಸಮೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸರ್ಕಾರ ದೃಢಸಂಕಲ್ಪ ತೊಟ್ಟಿದೆ.
- ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ.
• 40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ.
• 2,825 ಕೋಟಿ ವೆಚ್ಚ ಭರಿಸಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ.
• 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ.
• 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ.
• 36 ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್ ಸಹಾಯಧನ.
• 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ.
- ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
- ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ʻಮಿಲೆಟ್ ಹಬ್ʼ ಅನ್ನು ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸಲಾಗುವುದು.
- ರೈತರಿಗೆ ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶಗಳನ್ನು ಒದಗಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆದು ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಪರೀಕ್ಷಣಾ ಸೇವೆಗಳನ್ನು ಒದಗಿಸಲಾಗುವುದು.
- ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ರೈತರಲ್ಲಿ ಪ್ರೇರೇಪಿಸಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲಾಗುವುದು.
- ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತʼ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು.
- ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಇವುಗಳನ್ನು ನಿಯಂತ್ರಿಸಲು ಅಗತ್ಯವಿರುವ ಪರಿಸರ ಸ್ನೇಹಿ ಜೈವಿಕ ಪೀಡೆನಾಶಕ/ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳ ಶಿಫಾರಸ್ಸುಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
- ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ʻರೈತ ಕರೆ ಕೇಂದ್ರʼವನ್ನು
AI ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು. - ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼ ವನ್ನಾಗಿ ಉನ್ನತೀಕರಿಸಲಾಗುವುದು.
- ಕೃಷಿ ಚಟುವಟಿಕೆಯಲ್ಲಿ ರೈತರ ಸಮಯ ಹಾಗೂ ಶ್ರಮ ತಗ್ಗಿಸುವುದರೊಂದಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ
ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು. - ಕೃಷಿ ಸಂಬಂಧಿತ ಕಸುಬುಗಳನ್ನು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು.
- ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
- ಹವಾಮಾನ ಬದಲಾವಣೆಗೆ ಹೊಂದಾಣಿಕೆ ಹಾಗೂ ತಗ್ಗಿಸುವಿಕೆಯ ರಾಜ್ಯದ ಪ್ರಯತ್ನಗಳನ್ನು ಬಲಪಡಿಸಿ ಕೃಷಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಲು ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವ (Alternate Wetting & Drying) ವಿಧಾನಗಳನ್ನು ಉತ್ತೇಜಿಸಲಾಗುವುದು.
- ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸುವುದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ MSIL ವತಿಯಿಂದ ರೈತ ಮಾಲ್ಗಳನ್ನು ಸ್ಥಾಪಿಸಲಾಗುವುದು.
- ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು.
- ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಅಥಣಿಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಒದಗಿಸಲಾಗುವುದು.
ತೋಟಗಾರಿಕೆ
- ತೋಟಗಾರಿಕೆಯನ್ನು ರೈತರ ಆದಾಯ ವೃದ್ಧಿಯ ಪ್ರಮುಖ ಇಂಜಿನ್ ಆಗಿ ರೂಪಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಉತ್ಕೃಷ್ಟ ಗುಣಮಟ್ಟ, ಅಧಿಕ ಮೌಲ್ಯದ, ಹವಾಮಾನ
ಸ್ಥಿತಿ-ಸ್ಥಾಪಕ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ:
• ಹೊಸದಾಗಿ 89,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೇಸಾಯ ಅಳವಡಿಕೆ;
• 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಿ 2.36 ಲಕ್ಷ ರೈತರಿಗೆ ಅನುಕೂಲ;
• ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ 2,378 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ;
• 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳ ನಿರ್ಮಾಣ.
- ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ಜಮೀನನ್ನು ಉಪಯೋಗಿಸಿ ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು PPP ಮಾದರಿಯಲ್ಲಿ ಸ್ಥಾಪಿಸಲಾಗುವುದು.
- ಅಡಿಕೆ ಬೆಳೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ಮತ್ತು ತೆಂಗು ಬೆಳೆಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
- ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಶೀತಲಗೃಹಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು.
- ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
- ನೀರಿನ ಸಂರಕ್ಷಣೆ ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೈಡ್ರೋಪೊನಿಕ್ಸ್ (Hydroponics) ಹಾಗೂ ಕೋಕೋಪೀಟ್ (Coco peat) ಆಧಾರಿತ ಮಣ್ಣಿಲ್ಲದ ಕೃಷಿಯನ್ನು ಪ್ರೋತ್ಸಾಹಿಸಲಾಗುವುದು.
- ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಡಂಬಳದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ರೇಷ್ಮೆ
- ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಶೇ.46 ರಷ್ಟು ಪಾಲು ಹೊಂದಿರುವ ಕರ್ನಾಟಕವು ದೇಶದ ರೇಷ್ಮೆ ರಾಜಧಾನಿಯಾಗಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಮೊತ್ತದ ಸಹಾಯಧನವನ್ನು 2 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ
- ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು, ಇ-ಪೇಮೆಂಟ್ ಮತ್ತು ಇ-ಪಾವತಿ ವ್ಯವಸ್ಥೆಯನ್ನು ಆರಂಭಿಸಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ.
- ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ಇರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗುವುದು.
- ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು.
- ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಪಶು ಸಂಗೋಪನೆ
- ನಮ್ಮ ಸರ್ಕಾರದ ಪ್ರಾರಂಭದ ಅವಧಿಯಲ್ಲಿ ಪ್ರತಿದಿನ 8.75 ಲಕ್ಷ ಹಾಲು ಉತ್ಪಾದಕರಿಂದ 81.78 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಪ್ರಸ್ತುತ ಪ್ರತಿದಿನ 9.07 ಲಕ್ಷ ಹಾಲು ಉತ್ಪಾದಕರಿಂದ ಸರಾಸರಿ ಒಂದು ಕೋಟಿ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಪೂರೈಕೆದಾರರಿಗೆ ಬಾಕಿ ಇದ್ದ 609 ಕೋಟಿ ರೂ. ಪ್ರೋತ್ಸಾಹಧನವನ್ನು ಒಳಗೊಂಡಂತೆ, ಇದುವರೆಗೂ ಒಟ್ಟಾರೆ 4,523 ಕೋಟಿ ರೂ. ಪ್ರೋತ್ಸಾಹಧನವನ್ನು ನೀಡಲಾಗಿದೆ.
- ಅನುಗ್ರಹ ಯೋಜನೆಯಡಿ ಕುರಿ/ಮೇಕೆಗಳ ಮತ್ತು ರಾಸುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಧನವನ್ನು ಹೆಚ್ಚಿಸಿ, ಇದುವರೆಗೂ 1.70 ಲಕ್ಷ ಫಲಾನುಭವಿಗಳಿಗೆ 101 ಕೋಟಿ ರೂ. ವಿತರಿಸಲಾಗಿದೆ.
- ʻಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಅಧಿನಿಯಮ, 2025ʼ ನ್ನು ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 6,702 ಕುರಿಗಾಹಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.
- ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 300 ಪಶುವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. 2026-27ನೇ ಸಾಲಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸದಾಗಿ 100 ಕಟ್ಟಡಗಳನ್ನು ನಿರ್ಮಿಸಲಾಗುವುದು.
- ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಕುರಿ/ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಹಸು/ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳಿಗೆ ಒಟ್ಟು 40 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
- ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ವಿಶೇಷ ಸೇವೆ ವ್ಯವಸ್ಥೆಯನ್ನು ತಾಲ್ಲೂಕು ಹಂತಕ್ಕೆ ವಿಸ್ತರಿಸಲು 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ತಾಲ್ಲೂಕು ಪಶು ಆಸ್ಪತ್ರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
- ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
- ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿವಾರಿಸಲು ʻವರ್ಷಕ್ಕೊಂದು ಕರುʼ ಎಂಬ ಘೋಷವಾಕ್ಯದೊಂದಿಗೆ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ ʻಫಲಧಾರೆʼ ಶಿಬಿರಗಳನ್ನು ಐದು ಕೋಟಿ ರೂ. ವೆಚ್ಚದಲ್ಲಿ ಏರ್ಪಡಿಸಲಾಗುವುದು.
- ಪಶುಗಳಲ್ಲಿನ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಹಾಗೂ ಬೀದರ್ನ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
- ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರೋಪಾಯವಾಗಿ ಸಂತಾನಹರಣ ನಿಯಂತ್ರಣವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜಾರಿಗೆ ತರುವ ಉದ್ದೇಶದಿಂದ ಪಶುವೈದ್ಯರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲು ಬೆಂಗಳೂರು ಹಾಗೂ ಬೀದರ್ ನಲ್ಲಿ ʻಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರʼವನ್ನು ಸ್ಥಾಪಿಸಲಾಗುವುದು.
ಮೀನುಗಾರಿಕೆ
- ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಾಗುವುದು.
- ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು (Mariculture) ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಸ್ಥಾಪಿಸಲಾಗುವುದು.
- ಮೀನು ಆಹಾರದ ಸೇವನೆಯನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು.
- ಮೀನು ಮಾರಾಟ ಮಾಡಲು ಸುಸಜ್ಜಿತ ಮೀನು ಮಾರುಕಟ್ಟೆಗಳ ಅವಶ್ಯಕತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು.
- ರಾಜ್ಯದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಒಳನಾಡು ಮೀನುಗಾರಿಕೆಯು ಗ್ರಾಮೀಣ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಮಹತ್ವವಾಗಿದೆ. ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ತರಬೇತಿ ನೀಡಿ ಸ್ಥಿರ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲಾಗುವುದು.
ಸಹಕಾರ
- 2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಫೆಬ್ರವರಿ 2026ರ ಅಂತ್ಯಕ್ಕೆ 25 ಲಕ್ಷ ರೈತರಿಗೆ 22,000 ಕೋಟಿ ರೂ. ಕೃಷಿ ಸಾಲವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ.
- ಯಶಸ್ವಿನಿ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ 870 ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ 86,253 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದು, ಇದಕ್ಕಾಗಿ 163 ಕೋಟಿ ರೂ.ಗಳನ್ನು ಭರಿಸಲಾಗಿದೆ.
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 3,863 PACS ಗಳು Go-Live ಆಗಿದ್ದು, Online ಸೇವೆಯನ್ನು ಒದಗಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದ 1,628 ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.
- ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್ಲೈನ್ನಲ್ಲಿ ನಿರ್ವಹಿಸಲು ಕ್ರಮವಹಿಸಲಾಗುವುದು.
- ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದ ರೈತರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ನಮ್ಮ ಸರ್ಕಾರ 100 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.
- ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಿಗಮದ ಅನುಪಯುಕ್ತ ಆಸ್ತಿಗಳನ್ನು ನಗದೀಕರಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್) ಮತ್ತು ಹುಬ್ಬಳ್ಳಿ (ಕಾಟನ್ ಮಾರ್ಕೆಟ್) ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು.
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ digitize ಮಾಡಲು 10 ಕೋಟಿ ರೂ. ವೆಚ್ಚದಲ್ಲಿ ERP (Enterprise Resource Planning) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
- ನಬಾರ್ಡ್ ಸಂಸ್ಥೆಯ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ʻಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ʼ ಸ್ಥಾಪಿಸಲು RBI ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಜಲಸಂಪನ್ಮೂಲ
“ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ”
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
- ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಗಳು ವಜಾಗೊಂಡಿರುವುದು ಕರ್ನಾಟಕಕ್ಕೆ ಮಹತ್ವದ ಕಾನೂನು ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ, ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
- ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಏತ ನೀರಾವರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು.
- ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ 2023-24ರ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರೂ ಸಹ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಆದರೂ, ರಾಜ್ಯ ಸರ್ಕಾರದ ವತಿಯಿಂದ ಈ ಯೋಜನೆಗೆ
11,343 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ. ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಭೂಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದರಿಂದಾಗಿ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಇದರಡಿ ಬರುವ ಫೀಡರ್ ಕಾಮಗಾರಿಗಳನ್ನು 2027ನೇ ಸಾಲಿನಲ್ಲಿ ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲಾಗುವುದು. - ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ UKP Stage-III ಯೋಜನೆಯಡಿ ಆಲಮಟ್ಟಿ ಅಣೆಕಟ್ಟನ್ನು 519.6 ಮೀ. ಯಿಂದ 524.256 ಮೀ. ಗೆ ಎತ್ತರಿಸುವ ಕಾಮಗಾರಿಯಿಂದ ಮುಳುಗಡೆಯಾಗುವ ಜಮೀನುಗಳು ಹಾಗೂ ನೀರಾವರಿ ಕಾಲುವೆ ಜಾಲಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಮತ್ತು ಸಂತ್ರಸ್ತರ ದೀರ್ಘಕಾಲದ ಬೇಡಿಕೆಗೆ ನಮ್ಮ ಸರ್ಕಾರ ಸ್ಪಂದಿಸಿ ಪರಿಷ್ಕೃತ ಒಪ್ಪಂದದ ದರಗಳನ್ನು ಅನುಮೋದಿಸಿದೆ. ಮುಳುಗಡೆಗೊಳ್ಳುವ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದೆ. ಒಪ್ಪಂದದ ಐತೀರ್ಪುಗಳ ಮುಖಾಂತರ ಜಮೀನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸಲಾಗುವುದು.
- ತುಂಗಭದ್ರಾ ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟುಗಳನ್ನು ಬದಲಾಯಿಸಿ ಹೊಸ ಗೇಟುಗಳ ಅಳವಡಿಕೆಯನ್ನು ಮುಂಗಾರು ಪೂರ್ವದಲ್ಲಿ ಪೂರ್ಣಗೊಳಿಸಲಾಗುವುದು. ಮುಂದುವರೆದು, ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಸೇರಿದಂತೆ ಇತರೆ ಪರ್ಯಾಯ ಮಾರ್ಗೋಪಾಯಗಳ ಕುರಿತು ಈಗಾಗಲೇ ಚಿಂತಿಸಲಾಗಿದೆ. ಇವುಗಳಲ್ಲಿ ಸಮಯೋಚಿತ ಪರ್ಯಾಯ ಮಾರ್ಗದ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ತುಂಗಭದ್ರಾ ಮಂಡಳಿಯ ಸಹಮತಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ತೀವ್ರತರವಾಗಿ ಪ್ರಯತ್ನಿಸಲಾಗುವುದು.
- ಮಹದಾಯಿ ಕಣಿವೆಯ ಕಳಸಾ-ಬಂಡೂರಾ ನಾಲಾ ಯೋಜನೆಗಳಡಿ ಅರಣ್ಯ ತೀರುವಳಿ ಪಡೆಯಲು ರಾಜ್ಯ ಸರ್ಕಾರವು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನಿಸಿದ್ದರೂ, ಈವರೆಗೆ ತೀರುವಳಿ ಲಭಿಸಿರುವುದಿಲ್ಲ. ಈ ಯೋಜನೆಗಳಿಗೆ ಈಗಾಗಲೇ ಗುತ್ತಿಗೆ ವಹಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅರಣ್ಯ ತೀರುವಳಿ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಈ ವಿಳಂಬದಿಂದ ರಾಜ್ಯ ಸರ್ಕಾರದ ಹೊರೆ ಹೆಚ್ಚಾಗುತ್ತಿದೆ.
- ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಉಡುತೊರೆಹಳ್ಳ ಯೋಜನೆಯನ್ನು 490 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
- ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗುವುದು.
- ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳಡಿ ಪೂರ್ಣಗೊಳ್ಳುವ ಹಂತದಲ್ಲಿನ 12 ನೀರಾವರಿ ಯೋಜನೆಗಳು, 22 ಕೆರೆ ತುಂಬುವ ಯೋಜನೆಗಳು ಮತ್ತು ಮೂರು ಆಧುನೀಕರಣ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೧ರಲ್ಲಿ ಲಗತ್ತಿಸಿದೆ.
- ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ 8,045 ಕೋಟಿ ರೂ. ಮೊತ್ತದ 75 ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೨ರಲ್ಲಿ ಲಗತ್ತಿಸಿದೆ.
- ರಾಜ್ಯದ ಕಾಡಾ ಪ್ರಾಧಿಕಾರದಡಿ ಹತ್ತಿಕುಣಿ ಹಾಗೂ ತುಂಗಭದ್ರಾ ಎಡದಂಡೆ ಶಾಖಾ ಕಾಲುವೆಯಡಿ ಬರುವ 4,745 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ Pressurised Piped Network ಪದ್ಧತಿಯನ್ನು ಅಳವಡಿಸಿ ನೀರಾವರಿ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು.
ಸಣ್ಣ ನೀರಾವರಿ
- ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ
164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 237 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು. - ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಹೆಚ್.ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯನ್ನು 140 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
- ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ೧೧೯ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
- 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏತ ನೀರಾವರಿ, ಚೆಕ್ ಡ್ಯಾಂ, ಕೆರೆಗಳ ಪುನಃಶ್ಚೇತನ ಅಭಿವೃದ್ಧಿ ಮುಂತಾದ 112 ಕಾಮಗಾರಿಗಳನ್ನು 1,793 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಿದೆ. (ಅನುಬಂಧ-3)
- ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಲು ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಲಾಗುವುದು.
- ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜಿಡಗಾದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಲ ಹೆಚ್ಚಿಸಲು ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕ್-ಅಪ್ ಹಾಗೂ ಚೆಕ್ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಶಾಲಾ ಶಿಕ್ಷಣ
- 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲಾಗಿದೆ.
- ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಅನುಮತಿಸಿ ಸರಳೀಕರಣಗೊಳಿಸಲಾಗಿದೆ.
- 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ಸವಲತ್ತುಗಳನ್ನು ಮೊದಲ ಬಾರಿಗೆ ನೇರ ನಗದು ವರ್ಗಾವಣೆ (DBT) ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರಗಳನ್ನು ಆನ್-ಲೈನ್ ಮೂಲಕ ವಿತರಿಸಲಾಗಿದೆ.
- ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ADB ನೆರವಿನೊಂದಿಗೆ 500 ಶಾಲೆಗಳು, KKRDB ನಿಧಿಯಿಂದ 200 ಶಾಲೆಗಳು ಹಾಗೂ KMERC ನಿಧಿಯಿಂದ 100 ಶಾಲೆಗಳು ಒಟ್ಟಾರೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದಕ್ಕಾಗಿ ಒಟ್ಟಾರೆ 3,900 ಕೋಟಿ ರೂ.ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವೆಚ್ಚ ಮಾಡಲಾಗುವುದು.
- ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿನ (KPS) ಶಿಕ್ಷಕರ ಹುದ್ದೆಗಳನ್ನು ಮಹತ್ವದ ಹುದ್ದೆಗಳೆಂದು ಪರಿಗಣಿಸಿ ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲಾಗುವುದು ಹಾಗೂ ಸದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿ ಮಾಡಲು ಆದ್ಯತೆ ನೀಡಲಾಗುವುದು.
- ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ವಿಶೇಷವಾಗಿ ದಾಖಲಾತಿ ಪ್ರಮಾಣ ಮತ್ತು ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. 2026-27ನೇ ಸಾಲಿನಿಂದ ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳನ್ನು, 1 ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು.
- ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಕಾಮಗಾರಿಗಳಿಗೆ 565 ಕೋಟಿ ರೂ.ಗಳು, ಶೌಚಾಲಯ ನಿರ್ಮಾಣಕ್ಕಾಗಿ 75 ಕೋಟಿ ರೂ.ಗಳು ಹಾಗೂ ಶಾಲೆಗಳಿಗೆ ಪೀಠೋಪಕರಣಗಳನ್ನು ಖರೀದಿಸಲು 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
- ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಸದರಿ ಅನುದಾನವನ್ನು ಶಾಲಾ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೇರವಾಗಿ ವರ್ಗಾಯಿಸಲಾಗುವುದು.
- ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಜಾರಿಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮರ್ಥ್ಯ ವೃದ್ಧಿಗಾಗಿ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮವನ್ನು 24 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.
- IIT ಧಾರವಾಡದ ಸಹಯೋಗದೊಂದಿಗೆ 8 ರಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ AI ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್ ಸೌಲಭ್ಯವನ್ನು ಒದಗಿಸಲಾಗುವುದು.
- 2026-27ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
- ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 BRC ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬರು ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಲಾಗುವುದು.
- ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು.
- ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು.
ಉನ್ನತ ಶಿಕ್ಷಣ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್ಗಳ ಬಲವರ್ಧನೆ, ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ADB ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ʻಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆʼ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್ಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ADB ನೆರವಿನೊಂದಿಗೆ 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
- ಹಿಂದಿನ ಸಾಲಿನಲ್ಲಿ ಘೋಷಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಯುವಿಸಿಇ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಲಾಗಿದೆ.
ಸದರಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಮುಂದುವರೆದು, ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಹಂತ ಹಂತವಾಗಿ ಭರ್ತಿ ಮಾಡಲಾಗುವುದು. - ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ 25 ಸರ್ಕಾರಿ ಪದವಿ ಕಾಲೇಜು, ಮೂರು ಪಾಲಿಟೆಕ್ನಿಕ್ ಹಾಗೂ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಲಾ ಒಂದು ಕೋಟಿ ರೂ.ಗಳಂತೆ ಒಟ್ಟು 31 ಕೋಟಿ ರೂ.ಗಳ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು.
- 1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಒಟ್ಟು 50 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ ಪೀಠೋಪಕರಣಗಳು ಹಾಗೂ ಕಟ್ಟಡಗಳ ದುರಸ್ತಿ/ನವೀಕರಣ ಕಾಮಗಾರಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕೈಗೊಳ್ಳಲಾಗುವುದು.
- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್ ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಒದಗಿಸಲಾಗುವುದು.
- ವಿಜಯಪುರ ಜಿಲ್ಲೆಯ ಚಡಚಣ, ಬೆಳಗಾವಿ ಗ್ರಾಮಾಂತರ ಹಾಗೂ ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ KKRDB macro ಅನುದಾನದಿಂದ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸಲಾಗುವುದು.
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕಕ್ಕೇರಾ, ರಾಯಚೂರು ಜಿಲ್ಲೆಯ ಅಂಬಾಮಠ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ಸರ್ಕಾರದ 11 ಪಾಲಿಟೆಕ್ನಿಕ್ಗಳಲ್ಲಿ ಹಾಗೂ ಚಿತ್ರದುರ್ಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಹೆಚ್ಚಿನ ಬೇಡಿಕೆ ಹಾಗೂ ಉದ್ಯೋಗಾವಕಾಶವಿರುವ ಕೋರ್ಸ್ಗಳಾದ AI, ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೈನಿಂಗ್ ಇಂಜಿನಿಯರಿಂಗ್, ಆಟೋಮೇಷನ್ ಇಂಜಿನಿಯರಿಂಗ್ ಮುಂತಾದ 15 ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು.
- AnitaB.org India ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ವೃತ್ತಿ ಜೀವನದ ಆರಂಭಿಕ ಹಂತದಲ್ಲಿರುವ ವಿಜ್ಞಾನ, ತಾಂತ್ರಿಕ, ಗಣಿತ ಮತ್ತು ಇಂಜಿನಿಯರಿಂಗ್ (STEM) ವಿಭಾಗಗಳಲ್ಲಿನ ಆಯ್ದ 3,000 ಮಹಿಳಾ ಪದವೀಧರರಿಗೆ ಕೌಶಲ್ಯಾಭಿವೃದ್ಧಿ/ವೃತ್ತಿನಿರತ ತರಬೇತಿಗಳನ್ನು ಒಟ್ಟು 13.50 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುವುದು.
- ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿಯೂ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 10 ಮತ್ತು 12ನೇ ತರಗತಿಗಳನ್ನು ವ್ಯಾಸಂಗ ಮಾಡಿ 2025-26ನೇ ಸಾಲಿನಿಂದ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಿರುವ 37,000 ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರೂ.ಗಳ ವಿದ್ಯಾರ್ಥಿ ವೇತನವನ್ನು ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ಹಾಗೂ ಉಳಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ವತಿಯಿಂದ ʻದೀಪಿಕಾ ವಿದ್ಯಾರ್ಥಿ ವೇತನʼ ಯೋಜನೆಯಡಿ ನೀಡಲಾಗುತ್ತಿದೆ. ಇದನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಲಾಗುವುದು.
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲಾಗುವುದು.
- ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಇಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು.
- ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು.
- ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ನಮ್ಮ ಸರ್ಕಾರವು ಉದ್ದೇಶಿಸಿದೆ.
- ಧಾರವಾಡ ಮತ್ತು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು.
- ಕರ್ನಾಟಕದಲ್ಲಿ NCC ಯನ್ನು ಉತ್ತೇಜಿಸುವ ಸಲುವಾಗಿ ಪ್ರಸ್ತುತ ಇರುವ 96,000 NCC ಕೆಡೆಟ್ಗಳ ಕಾರ್ಯಬಲವನ್ನು ಮುಂದಿನ ಎರಡು ವರ್ಷಗಳಲ್ಲಿ 10,000 ಗಳಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು 25 ಎಕರೆ ಜಮೀನನ್ನು ನೀಡಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಕಳೆದ ವರ್ಷ ಪ್ರಾರಂಭಿಸಲಾದ, ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.24ರಷ್ಟು ಇಳಿಕೆಯಾಗಿರುತ್ತದೆ. ಈ ಅಭಿಯಾನದಡಿ ಪ್ರತಿ ತಾಯಂದಿರ ಮರಣವನ್ನು ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಸೇವೆಗಳನ್ನು ನೀಡಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಿಗೆ ಮಾರ್ಗದರ್ಶನ, ಹೆಚ್ಚಿನ ಮಾನವ ಸಂಪನ್ಮೂಲ ಮತ್ತು ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ.
- ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಶಾಲಾ ಕಾಲೇಜುಗಳ 52 ಲಕ್ಷ ಮಕ್ಕಳಿಗೆ ರಕ್ತಹೀನತೆ ತಪಾಸಣೆ ನಡೆಸಲಾಗಿದೆ. ರಕ್ತಹೀನತೆ ಕಂಡುಬಂದಿರುವ 11.7 ಲಕ್ಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 3.7 ಲಕ್ಷ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಉಳಿದ ಮಕ್ಕಳಿಗೆ ಚಿಕಿತ್ಸೆ ಮತ್ತು ಅನುಸರಣೆ ಮುಂದುವರೆಸಲಾಗಿದೆ.
- ಹೃದಯದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ST-Elevated Myocardial Infarction (STEMI) ಕಾರ್ಯಕ್ರಮದಡಿ ಒಟ್ಟು 9.4 ಲಕ್ಷ ECG ಗಳನ್ನು ಮಾಡಲಾಗಿದ್ದು, 13,933 ತೀವ್ರ ಹೃದಯಾಘಾತದ ರೋಗಿಗಳನ್ನು ಪತ್ತೆ ಹಚ್ಚಿ ಇವರಲ್ಲಿ 7,668 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.
- ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
- ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಲಿ ಚಾಲ್ತಿಯಲ್ಲಿರುವ 2018ರ ಚಿಕಿತ್ಸಾ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಹೆಚ್.ಬಿ.ಪಿ.-2022 ಪ್ಯಾಕೇಜ್ ದರಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರಿಂದ ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ. ಇದಕ್ಕಾಗಿ 400 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು. ಸದರಿ ಯೋಜನೆಯನ್ನು ಯಶಸ್ವಿನಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ರಾಜ್ಯ ವಿಮಾ ಯೋಜನೆ ಮತ್ತು ಅನ್ವಯಿಸುವ ಇತರ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದು.
- ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಮಗ್ರ ಆಘಾತ ಆರೈಕೆ (Trauma Care) ಸೇವೆಗಳನ್ನು ಒದಗಿಸಲು ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಐಸಿಯುಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನು ಹಂತ ಹಂತವಾಗಿ ಪೂರೈಸುವ ಮೂಲಕ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 45 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
- ತೀವ್ರತರವಾದ ಅಪೌಷ್ಟಿಕತೆಯನ್ನು (Severe Acute Malnutrition) ಹೊಂದಿರುವ ಮಕ್ಕಳಿಗೆ ವೈದ್ಯಕೀಯ ಮತ್ತು ಪೌಷ್ಟಿಕಾಂಶದ ಚಿಕಿತ್ಸೆ ನೀಡಲು ಈಗಾಗಲೇ 86 ತಾಲ್ಲೂಕುಗಳಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳು (NRC) ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಉಳಿದ 63 ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಕಡಿಮೆ ಜನನ ತೂಕದ ಹಾಗೂ ಅನಾರೋಗ್ಯ ಪೀಡಿತ ನವಜಾತ ಶಿಶುಗಳಿಗೆ ಅಗತ್ಯವಿರುವ ವಿಶೇಷ ಔಷಧೋಪಚಾರ, ಸಮಗ್ರ ನವಜಾತ ಶಿಶು ಆರೈಕೆ ಸೌಲಭ್ಯಗಳು ಹಾಗೂ ಪ್ರಸವಪೂರ್ವ ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಟೈಪ್-1 ಮಧುಮೇಹದಿಂದ (Type-1 Diabetes) ಬಳಲುತ್ತಿರುವ 18 ವರ್ಷ ವಯಸ್ಸಿನವರೆಗಿನ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಉಚಿತ ಇನ್ಸುಲಿನ್ ಪೆನ್ಗಳನ್ನು ನೀಡಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲವರ್ಧನೆಗೊಳಿಸಲು KKRDB ವಾರ್ಷಿಕ ಸ್ಥಳೀಯ ಯೋಜನೆಯಲ್ಲಿ (micro plan) ಆದ್ಯತೆ ಮೇರೆಗೆ ಅನುದಾನವನ್ನು ಮೀಸಲಿರಿಸಲಾಗುವುದು.
- ಗಣಿಬಾಧಿತ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರಿನ ಎಲ್ಲಾ ತಾಲ್ಲೂಕುಗಳಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು KMERC ಅನುದಾನದಡಿಯಲ್ಲಿ ವಿಸ್ತರಿಸಲಾಗುವುದು.
- ಗಂಭೀರ, ದೀರ್ಘಕಾಲೀನ ಹಾಗೂ ಮಾರಣಾಂತಿಕ ಕಾಯಿಲೆಗಳೊಂದಿಗೆ ಬದುಕುತ್ತಿರುವ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಗೃಹಾಧಾರಿತ ಉಪಶಮನ ಆರೈಕೆಯನ್ನು Pallium India ಸಂಸ್ಥೆಯ ಸಹಯೋಗದೊಂದಿಗೆ ನೀಡಲಾಗುವುದು.
- ರಾಜ್ಯದಲ್ಲಿ ಬೇಡಿಕೆ ಇರುವ 50 ಕೇಂದ್ರಗಳಲ್ಲಿ 150 ಹಾಸಿಗೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಾರ್ಷಿಕವಾಗಿ 1.35 ಲಕ್ಷ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುವುದು. ಇದಕ್ಕಾಗಿ 20 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.
- ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು.
- ಜಿಲ್ಲಾ ಆರೋಗ್ಯ ಅಧಿಕಾರಿ (DHO), ಜಿಲ್ಲಾ ಶಸ್ತ್ರಚಿಕಿತ್ಸಕರು (DS) ಇತ್ಯಾದಿ ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳ ನೇಮಕಾತಿಯಲ್ಲಿ ವಸ್ತುನಿಷ್ಠತೆಯನ್ನು ತರುವ ಮೂಲಕ ಸಾರ್ವಜನಿಕ ಆರೋಗ್ಯ ವೃಂದವನ್ನು (Public Health Cadre) ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು.
- ಡಿಜಿಟಲ್ ಆರೋಗ್ಯ ಕಾರ್ಯಕ್ರಮದಡಿ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:
• ʻಸಮಸ್ತʼ ಮೊಬೈಲ್ ಅಪ್ಲಿಕೇಶನ್ ಮೂಲಕ ಆರೋಗ್ಯ ಇಲಾಖೆಯ ಎಲ್ಲಾ ಕ್ಷೇತ್ರ ಸಿಬ್ಬಂದಿ ನಿರ್ವಹಿಸುತ್ತಿರುವ ವಹಿಗಳ ಡಿಜಿಟಲೀಕರಣ;
• ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ರೋಗಿಗಳಿಗೆ ಸಂಪೂರ್ಣ ಗಣಕೀಕೃತ ನೋಂದಣಿ, ಆರೋಗ್ಯ ದಾಖಲೆಗಳ ಡಿಜಿಟಲೀಕರಣ ಮತ್ತು ಯುಪಿಐ ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿ;
• ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಲಿ-ರೇಡಿಯಾಲಜಿ (Scanning) ಮತ್ತು ಟೆಲಿ-ಲೇಬರ್ ರೂಮ್‌ಗಳ (Smart Labour Room) ಅಳವಡಿಕೆ. - ಇಸ್ಕಾನ್ ಮೂಲಕ ರೋಗಿಗಳಿಗೆ ಆಹಾರ ಪೂರೈಕೆಯ ಯಶಸ್ವಿ ಮಾದರಿಯನ್ನು ರಾಜ್ಯದ ಆಯ್ದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು.
- ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಆಯ್ದ ಆಯುಷ್ ಆಸ್ಪತ್ರೆಗಳಲ್ಲಿ ಪಂಚಕರ್ಮ ಘಟಕಗಳನ್ನು ಸ್ವಾವಲಂಬಿ (self-sustaining) ಮಾದರಿಯಲ್ಲಿ ಸ್ಥಾಪಿಸಲಾಗುವುದು.
- ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ವೈದ್ಯಕೀಯ ಶಿಕ್ಷಣ
- ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಸೌಕರ್ಯವನ್ನು ಇನ್ನಷ್ಟು ಸದೃಢಗೊಳಿಸಲು ಕೆಳಕಂಡ ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ:-
• ಕಾರವಾರದಲ್ಲಿ 198 ಕೋಟಿ ರೂ. ವೆಚ್ಚದ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ 10 ಕೋಟಿ ರೂ. ವೆಚ್ಚದ ಟ್ರಾಮಾ ಕೇರ್ ಕೇಂದ್ರ ಮತ್ತು ಮೈಸೂರು ಹಾಗೂ ತುಮಕೂರಿನಲ್ಲಿ ೯೨ ಕೋಟಿ ರೂ. ವೆಚ್ಚದ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
• ೨೩೬ ಕೋಟಿ ರೂ. ವೆಚ್ಚದ ಹುಬ್ಬಳ್ಳಿಯ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರದ ಕಟ್ಟಡವನ್ನು ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆಗೊಳಿಸಲಾಗುವುದು.
• ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ 1,000 ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಮತ್ತು ಅಂಗಾಂಗ ಕಸಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
- 2026-೨೭ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳಿಗೆ 620 ಕೋಟಿ ರೂ.ಗಳ ಅನುದಾನವನ್ನು ಮತ್ತು ಉಪಕರಣಗಳ ಖರೀದಿಗಾಗಿ 220 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ.
- ಮೈಸೂರಿನ 400 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 180 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು.
- ಹಿಂದಿನ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು 300 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದಿಸಲಾಗಿರುತ್ತದೆ. ಅಲ್ಲದೆ, ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಸದರಿ ಕಾಲೇಜುಗಳ ಕಾರ್ಯಾಚರಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
- ವಿಜಯಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು.
- ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.
- ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆಯನ್ನು ಮುನಿರಾಬಾದ್-ಟಿ.ಬಿ.ಡ್ಯಾಂನಲ್ಲಿ ಸ್ಥಾಪಿಸಲಾಗುವುದು.
- ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು 15 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು.
- ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐ.ವಿ.ಎಫ್ ಕೇಂದ್ರಗಳನ್ನು ಸ್ಥಾಪಿಸಲು ತಲಾ ಒಂದು ಕೋಟಿ ರೂ. ನೀಡಲಾಗುವುದು.
- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣಗೊಳಿಸಲಾಗುವುದು. ಬೆಂಗಳೂರು ವೈದ್ಯಕೀಯ ಕಾಲೇಜಿನ MBBS ಮತ್ತು BDS ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.