ಹುಣಸೂರು (ಮೈಸೂರು): ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಮುಂಗಡ ಪತ್ರದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರದ ಅಂಕಿ ಅಂಶಗಳನ್ನು ಬಜೆಟ್ ಪುಸ್ತಕದಲ್ಲಿ ಮುದ್ರಿಸಿ ತೋರಿಸಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಹೇಳಿದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮಾದಹಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ನಡೆದ ಶ್ರೀ ಗುರು ಬೂದಿಸ್ವಾಮಿಗಳ 397ನೇ ಆರಾಧನೆ ಹಾಗೂ 63 ಪ್ರಮಥರ ಪೂಜೆ, ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
ಬರೀ ಅಂಕಿ ಅಂಶಗಳನ್ನು ತೋರಿಸಿ ಏನು ಮಾಡುತ್ತೀರಿ? ಜನರ ಆಶೋತ್ತರಗಳನ್ನು ಈಡೇರಿಸಬೇಕು ಅಲ್ಲವೇ? ನಾನು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಮುಂದಿನ ದಿನಗಳ ಕರಾಳ ಎಂಬುದನ್ನು ಮರೆಯಬೇಡಿ. ಎಚ್ಚರಿಕೆಯಿಂದ ನಿರ್ಧಾರಗಳನ್ನು ಮಾಡಿ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.
ವೇದಿಕೆಯ ಮೇಲೆ ಆಸೀನರಾಗಿದ್ದ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ನನ್ನ ಸಹೋದರಿಗೆ ಒಂದು ಮಾತು ಹೇಳಬಯಸುತ್ತೇನೆ. ಮಹಿಳೆಯರಿಗೆ ನಿಮ್ಮ ಇಲಾಖೆಯಿಂದ ನೀಡುತ್ತಿರುವ ₹2000 ಗೃಹಲಕ್ಷ್ಮಿ ಹಣದ ಬಗ್ಗೆ ನನ್ನ ತಕರಾರು ಇಲ್ಲ, ಅದಕ್ಕೆ ನನ್ನ ವಿರೋಧವೂ ಇಲ್ಲ. ಕಳೆದ ಮೂರು ವರ್ಷಗಳಿಂದ ಈ ಯೋಜನೆಯ ಮೂಲಕ ₹70,000ರಿಂದ ₹75,000 ಕೋಟಿ ನೀಡಿರಬಹುದು. ಆದರೆ, ಅದಕ್ಕೆ ಹಣವನ್ನು ಎಲ್ಲಿಂದ ತರುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ರಾಜ್ಯದ ಸಾಲ ಈಗ ₹8.24 ಲಕ್ಷ ಕೋಟಿಗೆ ತಲುಪಿದೆ. ಈ ವರ್ಷ ಹೊಸದಾಗಿ 1.32 ಲಕ್ಷ ಕೋಟಿ ಸಾಲ ಮಾಡುತ್ತಿದ್ದಾರೆ. ಹಾಗೆ ಮಾಡುವ ಸಾಲದ ದುಡ್ಡು ಎಲ್ಲಿಗೆ ಹೋಗುತ್ತದೆ? ಬಂಡವಾಳ ವೆಚ್ಚ ಮಾಡುತ್ತಿಲ್ಲ, ಸರಕಾರಿ ಆಸ್ತಿಗಳು ನಿರ್ಮಾಣ ಆಗುತ್ತಿಲ್ಲ. ಹಾಗಾದರೆ ಸಾಲದ ಹಣವನ್ನೆಲ್ಲಾ ಏನು ಮಾಡುತ್ತಿದ್ದೀರಿ? ನಿಮ್ಮ ಮುಖ್ಯಮಂತ್ರಿಗಳಿಗೆ ಸ್ವಲ್ಪ ತಿಳಿವಳಿಕೆ ಹೇಳಿ, ಇಲ್ಲವಾದರೆ ರಾಜ್ಯದ ಪರಿಸ್ಥಿತಿ ದಯನೀಯ ಸ್ಥಿತಿಗೆ ಹೋಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ಕೇಂದ್ರ ಸಚಿವರು ಹೇಳಿದರು.
ನಾನು ಅಲ್ಪ ಅವಧಿಗೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಸಾಲ ಮನ್ನಾ ಮಾಡುತ್ತೇನೆ ಎಂದು ಮಾತು ಕೊಟ್ಟೆ. ಹಣವೇ ಇಲ್ಲ, ಸಾಲ ಮನ್ನಾ ಹೇಗೆ ಮಾಡುತ್ತೀರಿ ಎಂದು ಕುಹಕ ಆಡಿದರು. ಆದರೂ ನಾನು ಎಲ್ಲಿಯೂ ಸಾಲ ಮಾಡದೆಯೇ ಸಾಲ ಮನ್ನಾ ಮಾಡಿ ತೋರಿಸಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಶ್ರೀ ಸುತ್ತೂರು ಮಹಾಸಂಸ್ಥಾನದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು, ಶ್ರೀ ಸಿದ್ದಗಂಗಾ ಮಠದ ಶ್ರೀ ಡಾ. ಸಿದ್ದಲಿಂಗ ಮಹಾಸ್ವಾಮೀಜಿ ಅವರು, ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅವರು ಸೇರಿದಂತೆ ಅನೇಕ ಪರಮಪೂಜ್ಯರು ದಿವ್ಯಸಾನ್ನಿಧ್ಯ ವಹಿಸಿದ್ದರು.
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಾಜಿ ಮಂತ್ರಿಗಳಾದ ಸಾ.ರಾ. ಮಹೇಶ್ ಅವರು, ಶಾಸಕರಾದ ಜಿ.ಡಿ. ಹರೀಶ್ ಗೌಡರು, ಮಾಜಿ ಶಾಸಕರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.