ದೊಡ್ಡಬಳ್ಳಾಪುರ: ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿ ಯೂನಿಟ್-2ರಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಅವಘಡದಿಂದಾಗಿ (Fire accident) ಉಂಟಾಗಿರುವ ಬೆಂಕಿಯ ಕೆನ್ನಾಲಿಗೆ ಆವರಿಸುತ್ತಲೇ ಇದ್ದು, ಸತತ ಐದು ಗಂಟೆಗಳಿಂದಲೂ 10 ಅಗ್ನಿಶಾಮಕ ವಾಹನಗಳು ಸೇರಿದಂತೆ ಬೆಂಗಳೂರಿನಿಂದ ಎಸ್ಡಿಆರ್ಎಫ್ ಸಹ ಆಗಿಮಿಸಿದ್ದರು ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಕೇಬಲ್ ತಯಾರಿಕಾ ಕೈಗಾರಿಕೆಯ ಸುತ್ತಲೂ ಇತರೆ ಕೈಗಾರಿಕೆಗಳು ಇರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿದೆ. ಆದರೆ ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆಂಕಿ ಆಕಸ್ಮಿಕ ನಡೆದಿರುವ ಕೈಗಾರಿಕೆಯ ಸುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಕೇಬಲ್ ತಯಾರಿಕಾ ಕಂಪನಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಅವಘಡ ಸಂಭವಿಸಿರುವ ಕೈಗಾರಿಕೆಯು ಬೆಂಗಳೂರು ರಾಜ್ಯ ಹೆದ್ದಾರಿಗೆ ಸಮೀಪವೇ ಇರುವುದರಿಂದ ರಸ್ತೆಯಲ್ಲಿ ಟ್ರಾಪಿಕ್ ಜಾಮ್ ಸಹ ಉಂಟಾಗಿದೆ.
ಘಟನ ಸ್ಥಳದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಘಟನ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಪ್ಪ ಕೆ.ಯಗೋಳ ಅವರು ಭೇಟಿ ನೀಡಿ ಮಾಹಿತಿ ಪಡೆದರು.